ಮೇ 25ರಿಂದ 2ನೇ ಸೆಮಿಸ್ಟರ್ ತರಗತಿ ಆರಂಭ: ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್

ಮೈಸೂರು, ಮೇ 21, 2021 (www.justkannada.in): 

ಸದ್ಯ ಲಾಕ್ ಡೌನ್ ಹಾಗೂ ಕೊರೊನಾ 2ನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗುವುದು. ಆದರೆ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿರುವುದರಿಂದ 2ನೇ ಸೆಮಿಸ್ಟರ್ ಪಾಠ-ಪ್ರವಚನಗಳನ್ನು ಮೇ25ರಿಂದ ಮುಂದುವರಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೇ 23ರಿಂದ ತರಗತಿಗಳು ನಡೆಯುತ್ತಿಲ್ಲ. ಮೇ 10ರ ಬಳಿಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ 2ನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಬೇಕಾಗಿರುವುದರಿಂದ ಮೇ 25ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಬೋಧಕ ಸಿಬ್ಬಂದಿಗೆ ಕಾರ್ಯ ನಿಯೋಜನೆ ಮಾಡಬೇಕು ಎಂದು ತಿಳಿಸಿದರು.

ಆನ್ ಲೈನ್ ಮೂಲಕ ತರಗತಿ ನಡೆಸಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಕೆಲ ಆಫ್ ಲೈನ್ ನಡೆಸಿ ಪರೀಕ್ಷೆಗಳನ್ನು ನಡೆಸಲಾಗುವುದು, ಅಸೈನ್ ಮೆಂಟ್ ಅಂಕಗಳಿಗೆ ಸಂಬಂಧಿಸಿದಂತೆ ಆಯಾ ವಿಭಾಗಗಳು ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದರು.

6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಏಕೆಂದರೆ ಅವರು ಪಿಜಿ ಅಥವಾ ಮತ್ತಿತರ ಕೆಲಸಗಳಿಗೆ ತೆರಳಬೇಕಿರುವುದರಿಂದ ಅವಕಾಶ ಸಿಕ್ಕ ತಕ್ಷಣ ಪರೀಕ್ಷೆಗಳನ್ನು ನಡೆಸುವಂತೆ ಕುಲಪತಿಗಳು ತಿಳಿಸಿದರು.