ರಿಯಾಯಿತಿ ದರದಲ್ಲಿ ಪತ್ರಕರ್ತರಿಗೆ ಬಿಡಿಎ ಫ್ಲಾಟ್: ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಭರವಸೆ.

ಬೆಳಗಾವಿ,ಡಿಸೆಂಬರ್,27,2022(www.justkannada.in):  ಕಾರ್ಯ ನಿರತ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ ನೀಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರ ನಿಯೋಗ ಬೆಳಗಾವಿ ಸುವರ್ಣ ಸೌಧದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ ಸಂದರ್ಭದಲ್ಲಿ ಅವರು ಈ ಬಗ್ಗೆ ಕೂಡಲೇ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ತಮ್ಮ ಬೇಡಿಕೆ ಈಡೇರಿಸುವುದಾಗಿ  ಭರವಸೆ ನೀಡಿದರು.

ವಕೀಲರ ಸಂಘಕ್ಕೆ ನೀಡಿರುವ ಮಾದರಿಯಲ್ಲಿ ಪತ್ರಕರ್ತರಿಗೂ ಬಿಡಿಎ ಪ್ಲಾಟ್ ಗಳನ್ನು ಒದಗಿಸಲಾಗುವುದು. ಈ ಬಗ್ಗೆ ಸಂಘದ ಮೂಲಕ ಆದಷ್ಟು ಬೇಗ ಅರ್ಜಿಗಳನ್ನು ಅರ್ಹ ಪತ್ರಕರ್ತರಿಂದ ಪಡೆದು ಒಟ್ಟಿಗೆ ಬಿಡಿಎ ಗೆ ನೀಡುವಂತೆ ಅವರು ತಿಳಿಸಿದರು.

ನಿಯೋಗದಲ್ಲಿ ವಿಜಯವಾಣಿ ಪತ್ರಿಕೆಯ ರುದ್ರಣ್ಣ ಹರ್ತಿಕೋಟೆ, ಟಿವಿ 18 ರಾಜಕೀಯ ವಿಭಾಗದ ಮುಖ್ಯಸ್ಥ ಚಿದಾನಂದ ಪಟೇಲ್, ದಿಗ್ವಿಜಯ ಟಿವಿ ವಿಜಯ್, ಟಿವಿ 9 ನ ಪ್ರಮೋದ್ ಶಾಸ್ತ್ರಿ, ಪ್ರಜಾ ಟಿವಿಯ ಗೋವಿಂದ್, ವಿಶ್ವವಾಣಿ ಪತ್ರಿಕೆಯ ಮುಖ್ಯ ವರದಿಗಾರ ಶಿವಕುಮಾರ್ ಬೆಳ್ಳಿತಟ್ಟೆ ಉಪಸ್ಥಿತರಿದ್ದರು.

ಕೆಯುಡಬ್ಲ್ಯೂಜೆ ಅಭಿನಂದನೆ:

ಪತ್ರಕರ್ತರ ಪರವಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಸಲ್ಲಿಸಿದ ಮನವಿಗೆ ಕೂಡಲೇ ಸ್ಪಂದಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸಲ್ಲಿಸಿದ್ದಾರೆ.

Key words: BDA- flat – journalist- discounted- rates-SR Vishwanath- promises.