ಬಾಡಿಗೆ ಪರಿಷ್ಕರಿಸಲಿರುವ ಬೆಂಗಳೂರು ವಿವಿ: ಎಕರೆಗೆ 50 ಸಾವಿರ ರೂ. ನಿಗದಿಗೆ ನಿರ್ಧಾರ.

ಬೆಂಗಳೂರು, ನವೆಂಬರ್ 21, 2022 (www.justkannada.in): ಬೆಂಗಳೂರು ಮಹಾನಗರದಲ್ಲಿ ಬಹುಪಾಲು ಎಲ್ಲಾ ಬಾಡಿಗೆಗಳೂ ಹೆಚ್ಚಾಗುತ್ತಿವೆ. ಹಾಗಾದರೆ ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ಏಕೆ ಹಿಂದುಳಿಯಬೇಕು? ಬೆಂಗಳೂರು ವಿಶ್ವವಿದ್ಯಾಲಯವೂ ಸಹ ತನ್ನ ಆವರಣದಲ್ಲಿ ಬಾಡಿಗೆಗೆ ನೀಡಿರುವ ವಿವಿಧ ಸಂಸ್ಥೆಗಳ ಬಾಡಿಗೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಆವರಣ ಹಾಗೂ ಕಟ್ಟಡಗಳಲ್ಲಿರುವ ವಿವಿಧ ಸಂಸ್ಥೆಗಳಿಗೆ ಇನ್ನು ಮುಂದೆ ಒಂದು ಎಕರೆಗೆ ರೂ.೫೦,೦೦೦ ಬಾಡಿಗೆ ನಿಗಧಿಪಡಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ನಿಯಮ ಡಿಸೆಂಬರ್ ೧ ರಿಂದ ಜಾರಿಗೆ ಬರಲಿದೆ.

ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಒಂದು ಸುತ್ತೋಲೆಯಲ್ಲಿ, “ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್, ಇತ್ತೀಚೆಗೆ ನಡೆದಂತಹ ಒಂದು ಸಭೆಯಲ್ಲಿ ಸಂಸ್ಥೆಗಳ ಒಂದು ಎಕರೆ ಬಾಡಿಗೆಯನ್ನು ರೂ.೫೦,೦೦೦ಕ್ಕೆ ನಿಗಧಿಪಡಿಸಿ, ಪ್ರತಿ ವರ್ಷ ಈ ಬಾಡಿಗೆ ಮೊತ್ತ ಶೇ.೧೦ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ನಿಯಮ ಜ್ಞಾನಭಾರತಿ ಆವರಣದಲ್ಲಿರುವ ಎಲ್ಲಾ ಆಸ್ತಿಗಳಿಗೂ ಅನ್ವಯವಾಗಲಿದೆ. ಬಾಡಿಗೆಗಿರುವ ಸಂಸ್ಥಗಳ ಮುಖ್ಯಸ್ಥರು ಪರಿಷ್ಕೃತ ಬಾಡಿಗೆಯನ್ನು ಪಾವತಿಸಿ, ಬಾಡಿಗೆ ಪಾವತಿ ರಸೀದಿಯ ಒಂದು ಪ್ರತಿಯನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಜ್ಞಾನಭಾರತಿ ಆವರಣದಲ್ಲಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಬಾಡಿಗೆ/ ಭೋಗ್ಯದ ಒಪ್ಪಂದವನ್ನು ಮಾಡಿಕೊಳ್ಳಬೇಕಿದೆ. ಇಂತಹ ಸಂಸ್ಥೆಗಳಿಗೆ ಒಂದು ಹೊಸ ಬಾಡಿಗೆ ಕರಾರನ್ನು ಸಿದ್ಧಪಡಿಸಲಾಗಿದೆ. ಮುಂದುವರೆದು, ಈ ಸಂಸ್ಥೆಗಳಿಗೆ ಈ ತಿದ್ದುಪಡಿ ಮಾಡಿರುವ ಒಪ್ಪಂದಕ್ಕೆ ಸಹಿ ಹಾಕಿ ಸಲ್ಲಿಸಲು ತಿಳಿಸಲಾಗಿದೆ. ಈ ಕರಾರು ಪತ್ರಗಳನ್ನು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಸಲಾಗುವುದು,” ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಮಹೇಶ್ ಬಾಬು ಅವರು, “ನಮ್ಮ ವಿಶ್ವವಿದ್ಯಾಲಯದ ಆದಾಯದಲ್ಲಿ ಬಹಳ ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ. ಅನೇಕ ವರ್ಷಗಳಿಂದಲೂ ಬೆಂಗಳೂರು ವಿಶ್ವವಿದ್ಯಾಲಯ, ವಿವಿಧ ವಿಶ್ವವಿದ್ಯಾಲಯಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಯೋಜಿತ ಕಾಲೇಜುಗಳನ್ನು ಕಳೆದುಕೊಳ್ಳುವಂತಾಗಿದೆ. ತುಮಕೂರು ವಿಶ್ವವಿದ್ಯಾಲಯ ರಚನೆಯಾದಾಗ, ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದಂತಹ ಅನೇಕ ಕಾಲೇಜುಗಳು ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರ್ಪಡೆಗೊಂಡವು. ನಂತರ, ಬೆಂಗಳೂರು ಉತ್ತರ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳು ರಚನೆಯಾದವು. ಬರುವ ಫೆಬ್ರವರಿ ತಿಂಗಳಲ್ಲಿ, ಯುವಿಸಿಇ ಕೂಡು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಹೊರ ಹೋಗಲಿದೆ. ಹಾಗಾಗಿ ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಸ್ತುತ ನಮ್ಮ ವಿಶ್ವವಿದ್ಯಾಲಯ ಹಣಕ್ಕಾಗಿ ಬಹಳಷ್ಟು ರಾಜ್ಯ ಸರ್ಕಾರವನ್ನು ಅವಲಂಭಿಸುವಂತಾಗಿದೆ,” ಎಂದು ತಿಳಿಸಿದರು.

“ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅನೇಕ ಸಂಸ್ಥೆಗಳು ಈಗ ನೀಡುತ್ತಿರುವುದು ಬಹಳ ಕಡಿಮೆ ಬಾಡಿಗೆ. ಜೊತೆಗೆ ಈ ಬಾಡಿಗೆ ಮೊತ್ತವನ್ನು ಮುಂದಿನ ತಿಂಗಳು ಪರಿಷ್ಕರಿಸಬೇಕು. “ನೀವು ನಂಬುವಿರಾ? ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿರುವ ಒಂದು ಪ್ರತಿಷ್ಠಿತ ಸಂಸ್ಥೆ ಪಾವತಿಸುತ್ತಿರುವ ವಾರ್ಷಿಕ ಬಾಡಿಗೆ ಕೇವಲ ರೂ.1. ಮತ್ತೊಂದು ಸಂಸ್ಥೆ ರೂ.೯೦ ಬಾಡಿಗೆ ನೀಡುತ್ತಿದೆ. ಈ ಸಂಸ್ಥೆಗಳ ಕಾರ್ಯನಿರ್ವಹಣಾ ಮಾದರಿಯನ್ನು ಗಮನಿಸಿದರೆ ಅವರು ವಿಧಿಸುತ್ತಿರುವ ಶುಲ್ಕಗಳ ಪ್ರಮಾಣ ಬಹಳ ದುಬಾರಿಯಾಗಿವೆ. ಆದರೆ ಬಾಡಿಗೆ ನೀಡಲು ಮಾತ್ರ ಮುಂದಾಗುತ್ತಿಲ್ಲ. ಹಾಗಾಗಿ, ನಾವು ನಮ್ಮ ಪಾಲಿನ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಿದ್ದೇವೆ. ಪ್ರಸ್ತುತ, ನಮ್ಮ ವಿಶ್ವವಿದ್ಯಾಲಯದ ಒಟ್ಟು ವಾರ್ಷಿಕ ವೆಚ್ಚ ವಾರ್ಷಿಕ ರೂ.೧೩೦ ಕೋಟಿಗಳಷ್ಟಿದೆ,” ಎಂದು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ೧,೨೦೦ ಎಕರೆಗಳ ವ್ಯಾಪ್ತಿಯಲ್ಲಿ ಹರಡಿದ್ದು, ತನ್ನ ಆವರಣದಲ್ಲಿ ಸುಮರು ೩೦ ವಿವಿಧ ಸಂಸ್ಥೆಗಳಿಗೆ ಬಾಡಿಗೆಗೆ ಸ್ಥಳಾವಕಾಶವನ್ನು ನೀಡಿದೆ. “ಅನೇಕ ಸಂಸ್ಥೆಗಳು ತಮ್ಮ ಬಾಡಿಗೆ ಕರಾರನ್ನು ನವೀಕರಣವೇ ಮಾಡಿಲ್ಲ. ಇನ್ನೂ ಕೆಲವು ಕರಾರನ್ನು ಮಾಡಿಕೊಳ್ಳಬೇಕಿವೆ. ಆದ್ದರಿಂದ, ನಾವು ನಮ್ಮ ಬಾಡಿಗೆ ಕರಾರುಗಳನ್ನು ಸರಿಪಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬಾಡಿಗೆ ಪರಿಷ್ಕರಿಸಲು ನಿರ್ಧರಿಸಿದ್ದು, ಮುಂದಿನ ತಿಂಗಳಿಂದ ಪರಿಷ್ಕೃತ ಬಾಡಿಗೆಯನ್ನು ನೀಡುವಂತೆ ತಿಳಿಸಲಾಗುವುದು,” ಎಂದು ಅಭಿಪ್ರಾಯಪಟ್ಟರು.

ಹಾಗಾದರೆ, ವಿಶ್ವವಿದ್ಯಾಲಯ ಈಗ ಪ್ರತಿ ಎಕರೆಗೆ ರೂ.೫೦,೦೦೦ ಬಾಡಿಗೆ ಪಡೆಯುವುದನ್ನು ಯಾವ ಆಧಾರದ ಮೇಲೆ ನಿರ್ಧರಿಸಿತು? ಈ ಸಂಬಂಧ ಮಾತನಾಡಿದ ಬಾಬು ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಸಂಸ್ಥೆಗಳಿಗೆ ವಾರ್ಷಿಕ ಬಾಡಿಗೆ ಮೊತ್ತವನ್ನು ರೂ.೫೦,೦೦೦ ನಿಗಧಿಪಡಿಸಿದೆ. ಹಾಗಾಗಿ, ನಾವೂ ಸಹ ಸರ್ಕಾರದ ಬಾಡಿಗೆ ಮಾದರಿಯನ್ನೇ ಅನುಸರಿಸುತ್ತಿದ್ದೇವೆ,” ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್ ಗೌಡ ಎಂಬ ಕಾರ್ಯಕರ್ತರೊಬ್ಬರು, “ಸರ್ಕಾರಿ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು/ ಕಂಪನಿಗಳ ಬಾಡಿಗೆ ಪರಿಷ್ಕರಣೆಗೆ ರಾಜ್ಯ ಸರ್ಕಾರ ಒಂದು ಸರಿಯಾದ ಸೂತ್ರವೊಂದನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಭೂಮಿ/ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದು, ಬಹಳ ಕಡಿಮೆ ಬಾಡಿಗೆಯನ್ನು ಪಡೆಯುತ್ತಿವೆ. ಬಿಬಿಎಂಪಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಹಣಕಾಸಿನ ಪರಿಸ್ಥಿತಿ ಬಹಳ ಶೋಚನೀಯವಾಗಿವೆ. ಹಾಗಾಗಿ, ಬಾಡಿಗೆಗಳನ್ನು ಪರಿಷ್ಕರಿಸಲು ಇದು ಸೂಕ್ತ ಸಮಯವಾಗಿದ್ದು, ಇದರಿಂದ ಆದಾಯದ ಸರಿಯಾದ ಮೂಲವೂ ಸೃಷ್ಟಿಯಾದಂತಾಗುತ್ತದೆ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Bangalore University – revise- rent-50 thousand –per- acre