ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ: ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಮಯ ಪುನಃ ಮುಂದೂಡಿಕೆ.

ಬೆಂಗಳೂರು, ಡಿಸೆಂಬರ್ 10, 2022(www.justkannada.in): ಬೆಂಗಳೂರು-ಮೈಸೂರು ನಡುವಿನ ನೂತನ ದಶಪಥ ಎಕ್ಸ್ ಪ್ರೆಸ್ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಡೆಡ್‌ ಲೈನ್ ಅನ್ನು ಈಗಾಗಲೇ ವಿವಿಧ ಕಾರಣಗಳಿಗಾಗಿ ಹಲವು ಬಾರಿ ಮುಂದೂಡಲಾಗಿದೆ. ಈಗ ಮತ್ತೊಮ್ಮೆ ಡೆಡ್‌ ಲೈನ್ ಅವಧಿಯನ್ನು ಮಾರ್ಚ್ ತಿಂಗಳ ಮೊದಲನೇ ವಾರದವರೆಗೆ ಮುಂದೂಡಲಾಗಿದೆ.

ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಪ್ರಕಾರ ಈ ಹೆದ್ದಾರಿಯ ಬಹುತೇಕ ಪ್ರಮುಖ ಕಾಮಗಾರಿಗಳು ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಂಡರೂ ಸಹ, ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ (ಎನ್‌ಹೆಚ್‌ಎಐ) ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನೂ ಕೆಲವು ತಿಂಗಳುಗಳ ಅವಧಿ ಬೇಕಾಗುತ್ತದಂತೆ. ಪ್ರಸ್ತುತ ಯೋಜಿಸಿರುವ ಪ್ರಕಾರ ಈ ‘ಕಾಮಗಾರಿಗಳು ಸಂಪೂರ್ಣವಾಗಿ ಮುಕ್ತಾಯಗೊಂಡ’ ಹೆದ್ದಾರಿಯನ್ನು ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಮಾರ್ಚ್ ತಿಂಗಳ ಮೊದಲನೇ ವಾರದಲ್ಲಿ ಉದ್ಘಾಟಿಸಲಿದ್ದಾರೆ.

ಈ ನಡುವೆ, ಮದ್ದೂರು ಬೈಪಾಸ್ ರಸ್ತೆ ಕಾಮಗಾರಿಗಳು ಮುಕ್ತಾಯಗೊಂಡಿದೆ. ಶ್ರೀರಂಗಪಟ್ಟಣದ ಬಳಿಯ ಬೈಪಾಸ್ ರಸ್ತೆಯನ್ನು ನವೆಂಬರ್ ತಿಂಗಳ ವೇಳೆಗೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಕಾಮಗಾರಿ ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ, ಈ ಕಾಮಗಾರಿ ಮುಕ್ತಾಯಗೊಳ್ಳುವ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಈ ಎರಡು ಯೋಜನೆಗಳು ಮುಕ್ತಾಯಗೊಂಡರೆ, ಉಳಿದು ಕೊಳ್ಳುವ ಒಂದೇ ಒಂದು ದೊಡ್ಡ ಕಾಮಗಾರಿ ಎಂದರೆ ಮಂಡ್ಯ ಬೈಪಾಸ್ ರಸ್ತೆ. ಇದರ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಈ ತಿಂಗಳ ಕೊನೆಯವರೆಗೂ ಸಮಯ ಬೇಕಾಗುತ್ತದೆ.

“ಅಂದರೆ ಇದರರ್ಥ ಬಿಡದಿ, ರಾಮನಗರ-ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಬಳಿಯ ಎಲ್ಲಾ ಬೈಪಾಸ್ ರಸ್ತೆಗಳ ನಿರ್ಮಾಣ ಕಾಮಗಾರಿಗಳು ಆ ವೇಳೆಗೆ ಪೂರ್ಣಗೊಳ್ಳುತ್ತವೆ. ಆದರೂ ಸಹ ಯಲಿಯೂರು, ಹನಕೆರೆ ಕೆಳರಸ್ತೆ ನಿರ್ಮಾಣ, ಬುದನೂರು, ಇಂಡವಾಳ ಹಾಗೂ ಗೌಡಹಳ್ಳಿ ಬಳಿ ಕೆಲವು ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ,” ಎಂದು ಎಂಪಿ ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದ್ದಾರೆ.

“ಈ ಕಾಮಗಾರಿಗಳು ಮಾರ್ಚ್ ತಿಂಗಳ ಮೊದಲ ವಾರದ ವೇಳೆಗೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಿದ್ದೇವೆ. ಒಮ್ಮೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಪೂರ್ಣಗೊಂಡ ನಂತರ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

ಈ ಹಿಂದೆ ಈ ಎಕ್ಸ್ಪ್ರೆಸ್‌ ವೇ ೨೦೨೨ರ ದಸರಾ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು.

ಸತತ ಮಳೆಯಿಂದಾಗಿ ವಿಳಂಬ

ಎನ್‌ಹೆಚ್‌ ಎಐ ಅಧಿಕಾರಿಯೊಬ್ಬರ ಪ್ರಕಾರ, ಆಗಸ್ಟ್ 24 ರಿಂದ 30ರ ನಡುವೆ ಬಿಡದಿ, ಹಾಗೂ ರಾಮನಗರ ಹೋಬಳಿಗಳಲ್ಲಿ ಈ ವರ್ಷ ಬಹಳ ಮಳೆಯಾಗಿರುವ ಕಾರಣದಿಂದಾಗಿ ಕಾಮಗಾರಿಗಳು ವಿಳಂಬವಾಗಿವೆ. ಬಿಡದಿಯಲ್ಲಿ ಈ ಅವಧಿಯಲ್ಲಿ ೩೧.೩ ಎಂಎಂ ನಷ್ಟು ಹಾಗೂ ರಾಮನಗರದಲ್ಲಿ ೩೧.೭ ಎಂಎಂನಷ್ಟು ಮಳೆಯಾಗಿದೆ. ಈ ಹೆಚ್ಚುವರಿ ಮಳೆಯು ಎಕ್ಸ್ ಪ್ರೆಸ್‌ ವೇ ಕಾಮಗಾರಿಗಳನ್ನು ವಿಳಂಬಗೊಳಿಸಿದೆ.

ಈ ಹೆದ್ದಾರಿಯ ಕಾಮಗಾರಿಯ ಕೆಲಸಗಳನ್ನು ಎರಡು ಹಂತಗಳಲ್ಲಿ ವಿಂಗಡಿಸಲಾಗಿದೆ; ಬೆಂಗಳೂರು-ನಿಡಘಟ್ಟ ಹಾಗೂ ನಿಡಘಟ್ಟ-ಮೈಸೂರು ವಿಭಾಗಗಳು. ಪಂಚಮುಖಿ ಗಣೇಶ ದೇವಸ್ಥಾನದ ಬಳಿ ೪.೨೨ ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣವೂ ಇದರಲ್ಲಿ ಸೇರಿದೆ.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ನಡುವೆ ಬೈಪಾಸ್‌ ಗಳ ರೂಪದಲ್ಲಿ ೫೩ ಕಿ.ಮೀ.ನಷ್ಟು ಗ್ರೀನ್‌ಫೀಲ್ಡ್ ರಸ್ತೆಗಳು ಇರುತ್ತವೆ.  ಬಿಡದಿ (೭ ಕಿ.ಮೀ.), ರಾಮನಗರ-ಚನ್ನಪಟ್ಟಣ (೨೨ ಕಿ.ಮೀ.), ಮದ್ದೂರು (೩.೫ ಕಿ.ಮೀ. ಉದ್ದದ ಎತ್ತರಿಸಿದ ಹೆದ್ದಾರಿ ಒಳಗೊಂಡಂತೆ (೭ ಕಿ.ಮೀ), ಮಂಡ್ಯ (೧೦ ಕಿ.ಮೀ.) ಹಾಗೂ ಶ್ರೀರಂಗಪಟ್ಟಣ (೭ ಕಿ.ಮೀ.).

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Bangalore-Mysore -Express –Highway-opening -postponed