ತೆನೆ ಹೊತ್ತ ಮಹಿಳೆ ಬದಲು ಕಣ್ಣೀರು ಹಾಕುವ ಮಹಿಳೆ ನಿಲ್ಲಿಸುವುದು ಒಳ್ಳೆಯದು-ಜೆಡಿಎಸ್ ಗೆ ಟಾಂಗ್: ಸಿದ್ದರಾಮಯ್ಯ ವಿರುದ್ದ ಗುಡುಗಿದ ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು,ನ,30,2019(www.justkannada.in): ಎಚ್ ಡಿ ಕುಮಾರಸ್ವಾಮಿ ಹೋದಲ್ಲೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ತೆನೆ ಹೊತ್ತ ಮಹಿಳೆ ಬದಲು ಜೆಡಿಎಸ್ ಅವರು‌ ಕಣ್ಣೀರು ಹಾಕುವ ಮಹಿಳೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಮತ್ತು ಜೆಡಿ ಎಸ್ ಕಚ್ಚಾಟ ಮಾಡಿದ್ದನ್ನು ನಾವು ನೋಡಿದ್ದೇವೆ. ಈ ಪಕ್ಷಗಳಿಗೆ ಜನ ಬೆಂಬಲ ಕೊಡುವುದಿಲ್ಲ. ಸುಭದ್ರ ಸರ್ಕಾರ ಹಾಗೂ ಅಭಿವೃದ್ಧಿ ಸರ್ಕಾರಕ್ಕೆ ಜನ ಬೆಂಬಲ ಕೊಡ್ತಾರೆ. ಕಿತ್ತಾಟ, ಅಭಿವೃದ್ಧಿ ಶೂನ್ಯ ಜೆಡಿಎಸ್ ಕಾಂಗ್ರೆಸ್ ನ ಗುಣಗಳು ಎಂದು ಕುಟುಕಿದರು.

ಅನರ್ಹ ಶಾಸಕರಿಂದ ಸರ್ಕಾರ ಬಿತ್ತು ಎಂದು ಎಚ್ ಡಿಕೆ ಮತ್ತು ಸಿದ್ದರಾಮಯ್ಯ ಹೊಸ ರಾಗವನ್ನು ಹಾಡುತ್ತಿದ್ದಾರೆ. ಅನರ್ಹ ಶಾಸಕರನ್ನು ಸೋಲಿಸಿ ಎಂಬುದು ಅವರ ಕರೆ, ಅವರು ಯಾರೂ ಕಾಂಗ್ರೆಸ್, ಜೆಡಿಎಸ್ ಗೆಲ್ಲಿಸಿ ಎಂದು ಹೇಳುತ್ತಿಲ್ಲ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ. ಸಿದ್ದರಾಮಯ್ಯ ಏಕಾಂಗಿಯಾಗಿ ಓಡಾಡುತ್ತಿದ್ದಾರೆ. ಯಾವ ನಾಯಕರು ಅವರ ಜತೆ ಇಲ್ಲ ನಮಗೆ ನಿರೀಕ್ಷೆ ಮೀರಿ ಜನ ಬೆಂಬಲ ನೀಡುತ್ತಿದ್ದಾರೆ. ಇದು ಅವರಿಗೆ ನುಂಗಲಾರದ ತುತ್ತಾಗಿದೆ. ನಾವು 15 ಸೀಟು ಗೆದ್ದರೂ ಅಚ್ಚರಿ ಇಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಕೆಳಮಟ್ಟದ ಪದ ಬಳಕೆ ಮಾಡುತ್ತಾರೆ. ಹೀಗಾಗಿ ಅವರು ಪ್ರತಿಪಕ್ಷ ಸ್ಥಾನದಲ್ಲಿ ಇರಲು ಯೋಗ್ಯರೋ, ಅಯೋಗ್ಯರೂ ಎಂದು ಗೊತ್ತಾಗುತ್ತಿಲ್ಲ. ಆ ತರದ ಪದ ಬಳಕೆ ಮಾಡುವುದು ಬೇಡ ಎಂಬುದು ನನ್ನ ಮನವಿ ಎಂದು ಕೆ.ಎಸ್ ಈಶ್ವರಪ್ಪ ಸಲಹೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ…

ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ಮುಂದುವರೆಸಿದ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಸೇಬಿನ ಹಾರದ ಸರದಾರ ಆಗಿದ್ದಾರೆ  ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯ ರನ್ನು ಹಿಗ್ಗಾಮುಗ್ಗಾ ಬಯ್ತಾ ಇದ್ದಾರೆ. ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರ, ಅಂಬೇಡ್ಕರ್ ಬಿಟ್ರೆ ಅವರೇ ತರ ಆಡುತ್ತಿದ್ದಾರೆ. ಅವರೊಬ್ಬ ‌ಪಕ್ಷ ದ್ರೋಹಿ. ಲೋಕಸಭೆ ಚುನಾವಣೆಯಲ್ಲಿ ಅವರು ಕೆ.ಎಚ್.ಮುನಿಯಪ್ಪರನ್ನು ಸೋಲಿಸಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಕೂಡ ಪಕ್ಷ ದ್ರೋಹಿ ಆಗಿದ್ದಾರೆ. ದೇವೇಗೌಡರನ್ನು ಸೋಲಿಸಲು ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ಎಚ್ ಡಿಕೆ ಹೋದಲ್ಲೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ತೆನೆ ಹೊತ್ತ ಮಹಿಳೆ ಬದಲು ಜೆಡಿಎಸ್ ಅವರು‌ ಕಣ್ಣೀರು ಹಾಕುವ ಮಹಿಳೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಲೇವಡಿ ಮಾಡಿದರು.

ಹೊಸಕೋಟೆಯಲ್ಲಿ ಸಂಸದರು ಬಂದಿಲ್ಲ. ಇದರ‌ ಬಗ್ಗೆ ಕೇಂದ್ರದ ನಾಯಕರು ಗಮನಿಸುತ್ತಾರೆ. ಅವರು ಓಡಾಟ ಮಾಡದೇ ಇದ್ದರೂ ಕೂಡ ಬಿಜೆಪಿ 15 ಕ್ಷೇತ್ರ ಗೆಲ್ಲುತ್ತದೆ. 15 ಕ್ಷೇತ್ರದಲ್ಲಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತ ಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ನೂರು‌ ಕಾಲ ಬದುಕಲಿ..

ಸಿದ್ದರಾಮಯ್ಯ ನೂರು‌ ಕಾಲ ಬದುಕಲಿ, ಆದರೆ ಅವರು ಹೋದ ಪಕ್ಷ ಛಿದ್ರ ಛಿದ್ರ ಆಗುತ್ತದೆ. ಅವರು ಇನ್ನು ಯಾವತ್ತೂ ಸಿಎಂ ಆಗುವುದಿಲ್ಲ. ಅವರು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಅವರು ಮುಪ್ಪಿನಲ್ಲಿ ಇದ್ದು, ಬಿಜೆಪಿ ಸರ್ಕಾರವನ್ನು ನೋಡಿ‌ ಕಲಿಯಲಿ. ಅವರು ಐದು ವರ್ಷ ಸಿಎಂ ಆಗಿದ್ದೇ ದೊಡ್ಡ ಸಾಧನೆ. ಅವರೇ ಸಿಎಂ ಅಂಥ ಹೇಳುತ್ತಿದ್ದಾರೆ. ಅವರ ಜತೆ ಯಾರೂ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಲ್ವಾ? ಅವರು ನಂಬಿದಂಥ ವ್ಯಕ್ತಿಯನ್ನು ಉದ್ಧಾರ ಮಾಡಿದ್ದಾರಾ ? ಎಂದು ಕೆ.ಎಸ್ ಈಶ್ವರಪ್ಪ ನುಡಿದರು.

ಎಚ್.ವಿಶ್ವನಾಥ್ ರನ್ನು ಮುಳುಗಿಸಿದ್ದಾರೆ. ವಿಜಯ ಶಂಕರ್ ರನ್ನು ಕಾಂಗ್ರೆಸ್ ಗೆ ಕರೆದೊಯ್ದು ಸೋಲಿಸಿದರು. ಭೈರತಿ ಬಸವರಾಜು, ಎಂಟಿಬಿ ಬಗ್ಗೆ ಕೆಟ್ಟದಾಗಿ ಪದ ಬಳಸುತ್ತಿದ್ದಾರೆ. ಸಿಎಂ ಆಗಲು ಹಣ ಕೊಟ್ಟಿದ್ದರು ಈಗ ಅವರನ್ನೇ ಬಯ್ಯುತ್ತಿದ್ದಾರೆ. ಅವರ ಹಿತೈಷಿಗಳನ್ನು ತುಳಿಯುವಂಥ ವ್ಯಕ್ತಿ ಯಾವೊಬ್ಬ ಕುರುಬರನ್ನು ಉದ್ಧಾರ ಮಾಡಿಲ್ಲ. ಅವರ ಪಕ್ಷವನ್ನು ಅವರೇ ಸಾಯಿಸುತ್ತಿದ್ದಾರೆ. ಆದರೆ ಅವರು ಮತ್ರ ನೂರು ಕಾಲ ಬದುಕಬೇಕು ಸಿದ್ದರಾಮಯ್ಯ ಗೆ ಹುಚ್ಚು ಹಿಡಿದಂತಿದೆ. ಸಿಎಂ ಆಗ್ತೇನೆ ಎಂಬ ಹುಚ್ಚು ಹಿಡಿದಿದೆ. ಸಂಖ್ಯಾ ಬಲ ಇಲ್ಲದಿದ್ದರೂ ಖರ್ಗೆಯನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

Key words: Bangalore- minster- KS eshwarappa-jds- congress- former cm-siddaramaiah