ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ‘ ಬಂಟರಾತಿಥ್ಯ ‘ ಸಮ್ಮಿಲನ ಸೆ.8 ಕ್ಕೆ

 

ಬೆಂಗಳೂರು, ಸೆ.06, 2019 : (www.justkannada.in news ) ನಗರದ ಬಂಟರ ಹೊಟೇಲ್ ಮಾಲೀಕರ ಸಂಘ ಸೆ.8 ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ‘ ಬಂಟರಾತಿಥ್ಯ ‘ ಎಂಬ ಬಂಟರ ಹೊಟೇಲಿಗರ ಪ್ರಥಮ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ ಹೇಳಿದಿಷ್ಟು…

ಬಂಟರಾತಿಥ್ಯ ಅನ್ನೋದು ವಿಶಿಷ್ಟ ಕಾರ್ಯಕ್ರಮವಾಗಿದೆ. ಇಲ್ಲಿ ಹೊಟೇಲ್ ಉದ್ಯಮದ ಬಗ್ಗೆ ಯುವ ಉದ್ಯಮಿಗಳಿಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವು ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸೆಪ್ಟಂಬರ್ 8, ಭಾನುವಾರ ಬೆಳಗ್ಗೆ 10.30ಕ್ಕೆ ಮಾಜಿ ಸಂಸದರಾದ ಕೆ. ಜಯ ಪ್ರಕಾಶ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅಪರ ನಿರ್ದೇಶಕರು ಹಾಗೂ ಸಿಎಓ ಜಲಾನಯನ ಅಭಿವೃದ್ದಿಯ ಇಲಾಖೆಯ ಅಜಿತ್ ಕುಮಾರ್ ಹೆಗ್ಡೆ ಶಾನಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯುವ ಉದ್ಯಮಿಗಳಿಗೆ ಹೊಟೇಲ್ ಉದ್ಯಮಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಹಾಗೇ ‘ ಕುರುಕ್ಷೇತ್ರಕ್ಕೊಂದು ಆಯೋಗ ‘ ಅನ್ನೋ ಯಕ್ಷ ಪ್ರಯೋಗ ಕಾರ್ಯಕ್ರಮ ಹಾಗೂ ‘ ಎಲ್ಲಾ ಸಮಾ ಅತ್ತು ..’ ಅನ್ನೋ ಕುಂದಾಪ್ರ ಕನ್ನಡ ನಗೆ ನಾಟಕವೂ ನಡೆಯಲಿದೆ. ಸಂಜೆ ಸಂತೋಷ್ ಕುಮಾರ್ ಹೆಗ್ಡೆ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಬಂಟರಾತಿಥ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಸಚಿವರಾದ ಡಾ. ಸಿ. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಸಿ.ಟಿ. ರವಿ, ಎಂಆರ್‍ಜಿ ಗ್ರೂಪ್‍ನ ಚೇರ್‍ಮೆನ್ ಕೆ. ಪ್ರಕಾಶ್ ಶೆಟ್ಟಿ ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಸಂಚಾಲಕರಾದ ಜಿ.ಕೆ.ಶೆಟ್ಟಿ, ಸಂಚಾಲಕರಾದ ಕೊರ್ಗಿ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

key words : bangalore bunts hotel association meet