ಮೊದಲ ವಾಕ್ಚಿತ್ರದಲ್ಲಿ ನಟಿಸಿದ್ದ ನಟಿ ಎಸ್.ಕೆ ಪದ್ಮಾದೇವಿ ನಿಧನ…

ಬೆಂಗಳೂರು,ಸೆ,19,2019(www.justkannada.in): ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ‘ಭಕ್ತಧ್ರುವ'(1934)  ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಟಿ ಎಸ್. ಕೆ. ಪದ್ಮಾದೇವಿ ಅವರು ನಿಧನರಾಗಿದ್ದಾರೆ.

ಎಸ್.ಕೆ ಪದ್ಮಾದೇವಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ಬೆಂಗಳೂರು ಹುಟ್ಟೂರು. ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸಿದರು. ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದರು. ‘ಸಂಸಾರನೌಕ’ (1936) ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು. ‘ವಸಂತಸೇನ, ‘ಭಕ್ತ ಸುಧಾಮ’,‘ಜಾತಕ ಫಲ ಚಿತ್ರಗಳಲ್ಲಿಯೂ ನಟಿಸಿದರು. ‘ಭಕ್ತಸುಧಾ’ ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಪದ್ಮಾದೇವಿ ಅಭಿನಯಿಸಿದ್ದರು.

ರಂಗಭೂಮಿಯಲ್ಲೇ ತೊಡಗಿಕೊಂಡು ಬಹಳ ಕಾಲ ಚಲನಚಿತ್ರದ ಅಭಿನಯ ನಿಲ್ಲಿಸಿದರು. ‘ಮುಕ್ತಿ ಅಮರ ಮಧುರ ಪ್ರೇಮ’,  ‘ಸಂಕ್ರಾಂತಿ’ಚಿತ್ರಗಳಲ್ಲಿ  ನಟಿ ಪದ್ಮಾದೇವಿ ಅಭಿನಯಿಸಿದ್ದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕ್ರೌರ್ಯ’ ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದರು. ಮಗ ನಂದಕಿಶೋರ್ ನಿರ್ದೇಶಿಸಿದ ‘ಕಿರಣ’ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿಯೂ ಹೆಸರು ಮಾಡಿದವರು.

Key words: Bangalore- Actress- SK Padmadevi- passed away