ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನ ಪ್ರಭಾವಿ ರಾಜಕಾರಣಿ ಪುತ್ರ, ಸ್ನೇಹಿತರು ಭಾಗಿ ಶಂಕೆ…

ಬಳ್ಳಾರಿ,ಫೆ,13,2020(www.justkannada.in) ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.

ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಬೆಂಗಳೂರು ಮೂಲದ ಪ್ರಭಾವಿ ರಾಜಕಾರಣಿ ಪುತ್ರ ಮತ್ತು ಸ್ನೇಹಿತರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೂರು ದಿನಗಳ ಹಿಂದೆ ಐವರು ಯುವಕರು ಹಂಪಿ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಮರಿಯಮ್ಮನಹಳ್ಳಿ ಸಮೀಪ ದುರ್ಗಾ ಪೆಟ್ರೋಲ್‌ ಬಂಕ್‌ ಬಳಿ ಸೇತುವೆ ಮೇಲಿನಿಂದ ವೇಗವಾಗಿ ಬಂದ ಕಾರು, ರಸ್ತೆ ಬದಿ ನಿಂತಿದ್ದ ಪಾದಾಚಾರಿ ರವಿ ನಾಯ್ಕ (18) ಅವರಿಗೆ ಡಿಕ್ಕಿ ಹೊಡೆದು, ಸುಮಾರು 100 ಮೀಟರ್‌ ದೂರ ಅವರನ್ನು ಕಾರು ಎಳೆದೊಯ್ದಿತ್ತು. ರವಿ ಹಾಗೂ ಕಾರಿನಲ್ಲಿದ್ದ ಸಚಿನ್‌ (27) ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿತ್ತು.

ಕೆ.ಎ. 05 ಎಂಡಬ್ಲ್ಯೂ 0357 ಸಂಖ್ಯೆಯ ಕೆಂಗೇರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ನೋಂದಣಿಯಾಗಿರುವ ಕಾರು ಅಪಘಾತಕ್ಕೀಡಾಗಿದ್ದು ಅಪಘಾತದಲ್ಲಿ ಪ್ರಭಾವಿ ರಾಜಕಾರಣಿಯ ಪುತ್ರ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ಗೊತ್ತಾಗುತ್ತಿದ್ದಂತೆ ಅವರನ್ನು ಸ್ಥಳದಿಂದ ಬೇರೊಂದು ಕಾರಿನಲ್ಲಿ ತಕ್ಷಣವೇ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಇನ್ನು ಮೃತರ ಸಂಬಂಧಿಕರು ನೀಡಿದ ದೂರಿನನ್ವಯ ರಾಹುಲ್ ಎಂಬುವವರ ವಿರುದ್ದ ಎಫ್ ಐಆರ್ ದಾಖಲಾಗಿದೆ. ರಾಹುಲ್ ಬೆಂಗಳೂರಿನ ಜಾಲಹಳ್ಳಿ ನಿವಾಸಿ ಎಂದು ಉಲ್ಲೇಖವಾಗಿದೆ. ಈ ಮಧ್ಯೆ  ಪ್ರಭಾವಿ ರಾಜಕಾರಣಿಯ ಪುತ್ರನನ್ನ ರಕ್ಷಿಸಲು ಪ್ರಕರಣ ಮುಚ್ಚಿಹಾಕಲು  ಒತ್ತಡ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Key words: ballari –Mariammanahalli- car accident- case -influential politician-son-friends