ಉಗ್ರರು ಮತ್ತು ದೇಶಭಕ್ತರನ್ನು ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ: ಇದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನ- ಸಿಟಿ ರವಿ ವಾಗ್ದಾಳಿ.

ಚಿಕ್ಕಮಗಳೂರು,ಮೇ,3,2023(www.justkannada.in): ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಮಾಡ್ತೀವಿ ಎಂದು ಉಲ್ಲೇಖಿಸಿರುವ ವಿಚಾರ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಸಿ.ಟಿ.ರವಿ ,  ಕಾಂಗ್ರೆಸ್​ ಗೆ ತಾಲಿಬಾನಿಗಳಿಗೂ ರಾಷ್ಟ್ರಭಕ್ತರಿಗೂ ವ್ಯತ್ಯಾಸ ಗೊತ್ತಿಲ್ಲ. ಉಗ್ರರು, ದೇಶಭಕ್ತರನ್ನು ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ . ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ, ಈ ರೀತಿಯ ಕಾಂಗ್ರೆಸ್​ ಪಕ್ಷದ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಕಿಡಿಕಾರಿದರು.

ಇದು ಹನುಮಾನ್​ ನಾಡು, ಇಲ್ಲಿ ಹನುಮನನ್ನ ಆರಾಧಿಸುವಂತಹ ಭಜರಂಗದಳವನ್ನ, ಈ ದೇಶಭಕ್ತಿ ಸಂಘಟನೆಯನ್ನ ಬ್ಯಾನ್ ಮಾಡಲು ಹೊರಟಿದ್ದೀರಾ..? ಮುಂದೆ ಹನುಮಾನ್ ಜಯಂತಿಯನ್ನೂ ಬ್ಯಾನ್ ಮಾಡುತ್ತೀರಾ..?  ನಿಮ್ಮ ಆಟ ನಡೆಯುವುದಿಲ್ಲ. ಜನ ನಿಮ್ಮನ್ನ ಬ್ಯಾನ್ ಮಾಡುತ್ತಾರೆ. ಆ ಕಾಲ ದೂರ ಇಲ್ಲ ಎಂದು ಶಾಸಕ ಸಿ.ಟಿ ರವಿ ಗುಡುಗಿದರು.

ದೇಶಭಕ್ತರನ್ನ, ದೇಶದ್ರೋಹಿಗಳನ್ನು ಒಂದೇ ತಕಡಿಯಲ್ಲಿ ತೂಗುವುದು ನಿಮ್ಮ ಮಾನಸಿಕತೆ. ನಿಮ್ಮ ಕಾಂಗ್ರೆಸ್ ಮುಗಿದು ಹೋಗಬಹುದೇ ಹೊರತು ಭಜರಂಗದಳ ಮುಗಿಸಲಾಗುವುದಿಲ್ಲ. ಹಿಂದೆ ಇದೇ ತರ ಮಾತನಾಡಿದ್ದವರು ಕಳೆದು ಹೋಗಿದ್ದಾರೆ. ನೀವು ರಾಜಕೀಯವಾಗಿ ಮುಗಿದು ಹೋಗ್ತೀರಾ, ಇದಕ್ಕೆ ದೊಡ್ಡಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: bajaranga dal-ban- Congress –BJP MLA- CT Ravi