ರಕ್ಷಣೆಗೆ ಚರ್ಮದ ಬ್ಯಾಂಕ್..

ಬೆಂಗಳೂರು, ಡಿಸೆಂಬರ್ 14, 2021 (www.justkannada.in): ಇತ್ತೀಚೆಗೆ ತಮಿಳುನಾಡಿನ ಕೂನೂರು ಬಳಿ ನಡೆದಂತಹ ಭಾರತೀಯ ವಾಯುದಳದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿರುವಂತಹ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಅವರ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ರಾಜ್ಯದ ಏಕೈಕ ಚರ್ಮದ ಬ್ಯಾಂಕ್‌ ನಿಂದ ಭಾನುವಾರದಂದು ಸಂಗ್ರಹಿತ ಚರ್ಮವನ್ನು ಕಳುಹಿಸಿಕೊಡಲಾಯಿತು. ಈ ಚರ್ಮದ ಬ್ಯಾಂಕ್‌ ಗೆ ಬಹಳ ಕಡಿಮೆ ಚರ್ಮದ ದಾನ ಲಭಿಸುತ್ತಿದ್ದು, ಇತ್ತೀಚೆಗೆ ಅಂದರೆ ಸ್ಯಾಂಡಲ್‌ ವುಡ್ ಪವರ್‌ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರ ನಿಧನದ ನಂತರ ಸಾರ್ವಜನಿಕರಲ್ಲಿ ಚರ್ಮ ದಾನದ ಕುರಿತು ಅರಿವು ಮೂಡಿಸಿದ ಮೇಲೆ ಅತೀ ಹೆಚ್ಚಿನ ಚರ್ಮದಾನ ದೊರೆತಿದೆ.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪ್ರಸ್ತುತ ಬೆಂಗಳೂರಿನ ಕಮ್ಯಾಂಡ್ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಗೆ ಚರ್ಮ ಜೋಡಣೆಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಚರ್ಮದ ಬ್ಯಾಂಕ್‌ ನ ಅಧಿಕಾರಿಯೊಬ್ಬರು ತಿಳಿಸಿರುವಂತೆ ವ್ಯಕ್ತಿ ಮೃತಪಟ್ಟ ನಂತರ ಚರ್ಮವನ್ನು ದಾನ ಮಾಡಬಹುದು. ಆದರೆ ಚರ್ಮ ದಾನ ಮಾಡುವವರು ಬಹಳ ಅಪರೂಪ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಾಂಕ್ರಾಮಿಕ ಆವರಿಸಿದ ನಂತರವಂತೂ ಇದು ಇನ್ನೂ ಅಪರೂಪವಾಗಿದೆಯಂತೆ.

“ಭಾನುವಾರದಂದು ನಮಗೆ ಕಮ್ಯಾಂಡ್ ಆಸ್ಪತ್ರೆಯಿಂದ ಚರ್ಮದ ಬೇಡಿಕೆ ಬಂತು. ನಾವು ಕೂಡಲೇ ಚಿಕಿತ್ಸೆಗೆ ಅಗತ್ಯವಿರುವಷ್ಟು ಚರ್ಮವನ್ನು ಕಳುಹಿಸಿಕೊಟ್ಟೆವು. ನಮಗೆ ಇದೇ ಮೊದಲ ಬಾರಿಗೆ ಆರು ಜನರಿಂದ ಚರ್ಮ ದಾನ ದೊರೆತಿದ್ದು, ಪವರ್‌ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರ ನಿಧನದ ನಂತರ ಚರ್ಮ ದಾನದ ಕುರಿತಾಗಿ ಕೈಗೊಂಡ ಅರಿವು ಮೂಡಿಸುವ ಅಭಿಯಾನಗಳಿಂದಾಗಿ ಇದು ಸಾಧ್ಯವಾಗಿದೆ. ಇದರಿಂದಲೇ ಹೆಚ್ಚಿನ ಜನ ಚರ್ಮ ದಾನ ಮಾಡಲು ಬಂದಿದ್ದಾರೆ,” ಎಂದರು.

ಈಗ ಕ್ಯಾಪ್ಟನ್ ವರುಣ್ ಸಿಂಗ್ ಅವರ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುವ ಚರ್ಮವನ್ನು ಅಳವಡಿಸುವುದಕ್ಕೆ ಮುಂಚೆ ಕೆಲವು ವಾರಗಳವರೆಗೆ ಅಗತ್ಯ ಸಂಸ್ಕರಣೆ ಮಾಡಬೇಕಾಗುತ್ತದೆ. ಅಷ್ಟರಲ್ಲಿ ನಾವು ಮುಂಬೈ ಅಥವಾ ಚೆನ್ನೈನಿಂದ ಇನ್ನೂ ಅಗತ್ಯವಿರುವಷ್ಟು ಚರ್ಮವನ್ನು ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಜಿವಿಜಿ ಇನ್ವಿವೊ ಆಸ್ಪತ್ರೆಯ ಸ್ಥಾಪಕ ಅಧ್ಯಕ್ಷರು, ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ. ಗುಣಶೇಖರ್ ವುಪ್ಪಲಪಟ್ಟಿ ಅವರು ಯುಕೆಯಲ್ಲಿರುವ ಎನ್‌ ಹೆಚ್‌ಎಸ್‌ನಲ್ಲಿ ಸೇವೆ ಸಲ್ಲಿಸಿದ್ದು, ಅವರು ಹೇಳುವಂತೆ, ಸುಟ್ಟ ಗಾಯಗಳಾಗಿರುವಂತಹ ಶೇ.೯೩ರಷ್ಟು ರೋಗಿಗಳು ಕೆಲವು ವಾರಗಳವರೆವಿಗೂ ಬದುಕುಳಿಯುತ್ತಾರೆ, ಆದರೆ ಭಾರತದಲ್ಲಿ ಸುಟ್ಟಗಾಯಗಳಾಗುವ ರೋಗಿಗಳು ಶೇ.೨೦ರಷ್ಟು ಬದುಕುಳಿಯುವುದಿಲ್ಲವಂತೆ. ಅವರಿಗೆ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ವೆಲ್ಲಿಂಗ್ಟನ್ ಆಸ್ಪತ್ರೆಯಿಂದ ಬೆಂಗಳೂರಿನ ಕಮ್ಯಾಂಡ್ ಆಸ್ಪತ್ರೆಗೆ ವರ್ಗಾಯಿಸಿದ ಮಾಹಿತಿ ಮೊದಲಿಗೆ ಗೊತ್ತಾದ ನಂತರ ಚರ್ಮದ ಬ್ಯಾಂಕ್‌ ಗೆ ದೂರವಾಣಿ ಕರೆ ಮಾಡಿ ಎಷ್ಟು ಪ್ರಮಾಣದ ಚರ್ಮ ಲಭ್ಯವಿದೆ ಎಂದು ಮಾಹಿತಿ ಪಡೆದುಕೊಂಡರಂತೆ.

“ಚರ್ಮದ ಬ್ಯಾಂಕ್ ಕುರಿತು ಜನಸಾಮಾನ್ಯರಲ್ಲಿ ಇನ್ನೂ ಸಾಕಷ್ಟು ಅರಿವಿಲ್ಲ, ಹಾಗಾಗಿ ದಾನಿಗಳ ಸಂಖ್ಯೆಯೂ ಬಹಳ ಕಡಿಮೆ ಇದೆ. ಸ್ಯಾಂಡಲ್‌ ವುಡ್‌ ನ ಪವರ್‌ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರ ನಿಧನದ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಅದೇ ಸಮಯದಲ್ಲಿ ಕೆಲವು ಚರ್ಮ ದಾನಗಳು ನಡೆದವು. ಆದರೆ ದಾನ ಪಡೆದುಕೊಂಡ ಚರ್ಮವನ್ನು ನೇರವಾಗಿ ಬಳಸಲಾಗುವುದಿಲ್ಲ. ಅದಕ್ಕೂ ಮುಂಚೆ ರಾಸಾಯನಿಕ ಮತ್ತು ಮೈಕ್ರೋಬಿಯಲ್ ಸ್ವಚ್ಛತಾ ಪ್ರಕ್ರಿಯೆ ನಡೆಯುತ್ತದೆ, ಇದಕ್ಕೆ ಕನಿಷ್ಠ ಎಂಟು ವಾರಗಳ ಸಮಯ ಬೇಕಾಗುತ್ತದೆ. ಸುಟ್ಟಗಾಯಗಳ ರೋಗಿಗಳ ಚಿಕಿತ್ಸೆಗೆ ಚರ್ಮದ ಬ್ಯಾಂಕ್‌ನಿಂದ ಚರ್ಮವನ್ನು ನೀಡಿದ ನಂತರ, ಅದನ್ನು ಮೈಕ್ರೋಬಿಯಲ್ (ಸೂಕ್ಷ್ಮಜೀವಿ) ಮಾಲಿನ್ಯ ಮುಕ್ತವಾಗಿರುವುದನ್ನು ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Awareness – skin -donation.Leather bank – protection