ಆನೆ ಹಾವಳಿಗೆ ಶಾಶ್ವತ ಪರಿಹಾರ ಶೋಧಕ್ಕೆ ಅಂತಾರಾಷ್ಟ್ರೀಯ ಸಮ್ಮೇಳನ- ಸಚಿವ ಈಶ್ವರ್ ಖಂಡ್ರೆ

ಹಾಸನ, ಜುಲೈ,6, 2024 (www.justkannada.in):  ಕಾಡಾನೆಗಳು ನಾಡಿಗೆ ಬರಲು ಕಾರಣವೇನು ಎಂಬ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಯಸಳೂರು ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ ಹುತಾತ್ಮನಾದ ಮೈಸೂರು ಅಂಬಾರಿ  ಹೊತ್ತಿದ್ದ ಆನೆ ಅರ್ಜುನನ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಾನವ-ವನ್ಯಜೀವಿ ಸಂಘರ್ಷಕ್ಕೆ ಏನು ಕಾರಣ ಎಂಬ ಅಧ್ಯಯನಕ್ಕೆ ಒತ್ತು ನೀಡಲಾಗುವುದು ಎಂದರು.

ಆನೆ ಹಾವಳಿ ತಪ್ಪಿಸಲು ಆಗಸ್ಟ್ 12ರಂದು ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುವುದು. ಈ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ರೀತಿಯ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿ ಕೂಡ ಅಳವಡಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದು ತಿಳಿಸಿದರು.

ಮೈಸೂರು ದಸರಾ ಪ್ರಧಾನ ಆಕರ್ಷಣೆಯೇ ಜಂಬೂ ಸವಾರಿ. ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಈ ನಾಡಿನ ಹೆಮ್ಮೆ. ಅರ್ಜುನ ಆನೆ ಹಲವು ಯಶಸ್ವಿ ಆನೆ ಸೆರೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ ಮತ್ತು ಚಿರತೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ. ಆದರೆ ಡಿ.4ರಂದು ದುರಾದೃಷ್ಟವಷಾತ್ ಕಾಡನೆಯೊಂದಿಗೆ ಕಾದಾಡಿ ಹುತಾತ್ಮನಾದ ಎಂದು ತಿಳಿಸಿದರು.

ಅರ್ಜುನನ ಸ್ಮಾರಕವನ್ನು ಡಿಸೆಂಬರ್ 4ರ ಪ್ರಥಮ ಪುಣ್ಯ ತಿಥಿಯೊಳಗಾಗಿ ನಿರ್ಮಿಸುವಂತೆ ಸೂಚಿಸಿದ ಸಚಿವ ಈಶ್ವರ್ ಖಂಡ್ರೆ, ಈ ಸ್ಮಾರಕದಲ್ಲಿ ಅರ್ಜುನನ ಸಾಹಸಗಳ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಕಾಕನಕೋಟೆಯಲ್ಲಿ 1968ರಲ್ಲಿ ನಡೆದ ಖೆಡ್ಡ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿದ್ದ. ಹೀಗಾಗಿ ಸಮಾಧಿ ಸ್ಥಳ ಯಸಳೂರಿನ ಜೊತೆಗೆ ಬಳ್ಳೆಯಲ್ಲಿ ಕೂಡ ಸ್ಮಾರಕ ನಿರ್ಮಿಸಲಾಗುವುದು ಎಂದೂ ತಿಳಿಸಿದರು.

ಇದಕ್ಕೂ ಮುನ್ನ ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿಧ್ಯುಕ್ತವಾಗಿ ಭೂಮಿ ಪೂಜೆ ನೆರವೇರಿಸಿ, ಶಿಲಾನ್ಯಾಸ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಶಿವಲಿಂಗೇಗೌಡ, ಸಂಸತ್ ಸದಸ್ಯ ಶ್ರೇಯಸ್ ಪಟೇಲ್ ಮತ್ತು ಶಾಸಕ ಸಿಮೆಂಟ್ ಮಂಜು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.

Key words: Arjuna, Elephant, Monument, Minister, Ishwar Khandre