ಸುಗಮ ಕಲಾಪಕಕ್ಕೆ ಸಹಕರಿಸಿ: ವಿಪಕ್ಷ ನಾಯಕರಿಗೆ ಅಮಿತ್ ಶಾ ಪತ್ರ

ಬೆಂಗಳೂರು, ಜುಲೈ 26, 2023 (www.justkannada.in): ವಿಪಕ್ಷ ನಾಯಕರುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪತ್ರ ಬರೆದು ಸುಗಮ ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಕೋರಿದ್ದಾರೆ.

ಉಭಯ ಸದನಗಳಲ್ಲಿ ಮಣಿಪುರ ಸಂಘರ್ಷ ಚರ್ಚೆಗೆ ಅವಕಾಶ ನೀಡುವುದಾಗಿ ಇಬ್ಬರು ವಿಪಕ್ಷ ನಾಯಕರುಗಳಿಗೆ ಅಮಿತ್​ ಶಾ ತಿಳಿಸಿದ್ದಾರೆ.

ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರುತ್ತದೆ. ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಇದಕ್ಕಾಗಿ ಎಲ್ಲ ಪಕ್ಷಗಳ ಸಹಕಾರವನ್ನು ಕೋರುತ್ತಿದ್ದೇವೆ. ಈ ಮಹತ್ವದ ಸಮಸ್ಯೆ ಬಗೆಹರಿಸಲು ಎಲ್ಲ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಮಿತ್​ ಶಾ ಪತ್ರ ಬರೆದಿದ್ದು, ಈ ಕುರಿತು ಅವರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.