“ಅಂಬೇಡ್ಕರ್ ಕುರಿತ ಮಿಥ್‌ಗಳನ್ನು ಆಧಾರ ಸಮೇತ ಒಡೆದುಹಾಕಿದ ಕೃತಿ ಭಾರತ ಭಾಗ್ಯವಿಧಾತ”: ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್

ಮೈಸೂರು: ಭಾರತ ಭಾಗ್ಯವಿಧಾತ ಕೃತಿಯಲ್ಲಿ ಅಂಬೇಡ್ಕರ್ ಕುರಿತ ಪ್ರಚಲಿತದಲ್ಲಿದ್ದ ಮಿಥ್‌ಗಳನ್ನು ಆಧಾರ ಸಮೇತ ಒಡೆದುಹಾಕಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲಾಗಿದೆ. ಪ್ರತಿಯೊಬ್ಬ ಭಾರತೀಯ ಜಾತಿ, ಮತ, ಧರ್ಮಗಳ ಆಚೆ ನಿಂತು ಓದಿ ಅರಿಯಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ಪರಿವರ್ತನ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಕೃಷ್ಣಮೂರ್ತಿ ಚಮರಂ ಅವರ 25ನೇ ಕೃತಿ “ಭಾರತ ಭಾಗ್ಯವಿಧಾತ” ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭಾರತ ಭಾಗ್ಯವಿಧಾತ ಕೃತಿಯಲ್ಲಿ ಅಂಬೇಡ್ಕರ್ ಅವರನ್ನು ಕುರಿತ ವಿಶೇಷವಾದ ಚಿತ್ರಣವಿದೆ. ಅದು ಈ ತನಕ ಓದಿರುವ ಅಂಬೇಡ್ಕರ್ ಅವರ ಕೃತಿಗಳಿಗಿಂತ ಭಿನ್ನವಾಗಿದ್ದು, ಇದು ಸಂಶೋಧನಾತ್ಮಕವಾದ ವಿಶೇಷ ಕೃತಿಯಾಗಿದೆ ಎಂದರು.
ಈಗಾಗಲೇ ಈ ಕೃತಿ ಎರಡು ಮುದ್ರಣಗಳನ್ನು ಕಂಡಿದೆ. ಇದು ಪರಿಷ್ಕೃತ ಮೂರನೇ ಮುದ್ರಣವಾಗಿದೆ. ಇಲ್ಲಿ ಸಾಕಷ್ಟು ಹೊಸ ಲೇಖನಗಳನ್ನು ಸೇರಿಸಿ ಪರಿಷ್ಕರಿಸಿದ್ದಾರೆ. ಅಂದರೆ, ಅಂಬೇಡ್ಕರ್ ಮತ್ತು ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ದಾಖಲಿಸಲಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಭಾರತದ ಪ್ರತಿಯೊಂದು ಕ್ಷೇತ್ರದಲ್ಲಿ ಹೇಗೆ ಭಾರತ ಭಾಗ್ಯವಿಧಾತರಾದರು ಎಂಬುದನ್ನು ಈ ಕೃತಿ ಸಾಬೀತುಪಡಿಸಿದೆ. ಬಾಬಾಸಾಹೇಬರ್ ಬಹುಮುಖಗಳನ್ನು ಹೆಕ್ಕಿ ತೆಗೆಯಲಾಗಿದೆ. ಕಾರ್ಮಿಕರ ಹಕ್ಕುಗಳಿಗೆ, ಮಹಿಳಾ ಹಕ್ಕುಗಳಿಗೆ, ಕೃಷಿಕರಿಗೆ, ನೀರಾವರಿಗೆ, ಆರ್‌ಬಿಐ ಸ್ಥಾಪನೆಗೆ, ಆರ್ಥಿಕ ಸಿದ್ಧಾಂತ ಒಗಿಸಿದ್ದು, ಹಸಿರು ಕ್ರಾಂತಿಗೆ ಕರೆ ನೀಡಿದ್ದು, ನ್ಯಾಯಬೆಲೆ ಅಂಗಡಿಗಳ ಸ್ಥಾಪನೆ ಹೀಗೆ ಅಂಬೇಡ್ಕರ್ ಅವರ ಸಾಧನೆ ಅಪಾರವಾಗಿದೆ ಎಂಬುದನ್ನು ತಿಳಿಸುತ್ತದೆ ಎಂದು ಮಾಹಿತಿ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಗುಬ್ಬಿಗೂಡು ರಮೇಶ್ ಕೃತಿ ಕುರಿತು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಅನುಸರಿಸುವ ಮಾರ್ಗವಾಗಿದ್ದು, ಆರಾಧಿಸುವುದಲ್ಲ. ಅಂಬೇಡ್ಕರ್ ಎಂದರೇ ಕೇವಲ ಮೀಸಲಾತಿ ಎನ್ನುವಂತೆ ಬಿಂಬಿಸಲಾಗಿದೆ. ದೇಶಕ್ಕೆ ಅವರ ಕೊಡುಗೆ ಏನು ಎಂಬುದರ ಕುರಿತು ತಿಳಿಸುವ ಕಾರ್ಯವಾಗಬೇಕಿದೆ ಎಂದರು.

ಅಂಬೇಡ್ಕರ್ ಬದುಕಿರುವವರೆಗೆ ಯಾರ ಬಗ್ಗೆಯು ನಕರಾತ್ಮಕವಾಗಿ ಮಾತನಾಡಿದವರಲ್ಲ. ಅಂಬೇಡ್ಕರ್ ಅವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ವಿದ್ಯಾವಂತರು ಜಾಗೃತರಾಗಬೇಕು. ಸರ್ವರು ಒಪ್ಪುವಂತಹ, ಪ್ರೀತಿಸುವಂತಹ ರೀತಿಯಲ್ಲಿ ಕೃತಿಯನ್ನು ರಚಿಸಲಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.  ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ದಲಿತ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಸಂದೇಶ್ ಮಣಗಳ್ಳಿ ಇತರರು ಹಾಜರಿದ್ದರು.