ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಮೊದಲ ಸಭೆ ಯಶಸ್ವಿ:ಮಹತ್ವದ ಮಾಹಿತಿ ಹಂಚಿಕೊಂಡ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ನ್ಯಾಯ ಯೋಧ ರಾಹುಲ್ ಗಾಂಧಿಯವರ ಸಾಮಾಜಿಕ ನ್ಯಾಯದ ಪರ ಬದ್ಧತೆಗೆ,  ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೊದಲ ಸಭೆಯ ಬೆಂಗಳೂರು ಘೋಷಣೆ ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು  ತೋರಿರುವ ಧೈರ್ಯ  ಹಾಗೂ ವಿಶೇಷವಾಗಿ ಹಿಂದುಳಿದ ವರ್ಗಗಳ ಬಗ್ಗೆ ತೋರಿರುವ ಕಾಳಜಿಗೆ ಎಐಸಿಸಿ ಒಬಿಸಿ ವಿಭಾಗದ ಸಲಹಾ ಸಮಿತಿಯು,  ನ್ಯಾಯ ಯೋಧರಾದ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು  ಅರ್ಪಿಸುತ್ತದೆ ಎಂದರು.

ರಾಹುಲ್ ಗಾಂಧಿಯವರ ದೃಢನಿಶ್ಚಯದಿಂದಾಗಿ ಮನುವಾದಿ ಮೋದಿ ಸರ್ಕಾರವನ್ನು ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಯಾಗಿದ್ದ  ಜಾತಿ ಗಣತಿಯನ್ನು  ಭಾರತದಲ್ಲಿ ಕೈಗೊಳ್ಳುವಂತೆ ಮಾಡಿತು. ಈ ಐತಿಹಾಸಿಕ ಸಾಧನೆಗಾಗಿ ಭಾರತದ ಎಲ್ಲಾ ಹಿಂದುಳಿದ ವರ್ಗಗಳ ಪರವಾಗಿ ಸಮಿತಿಯು ಹೃತ್ಪೂರ್ವಕವಾಗಿ  ರಾಹುಲ್ ಗಾಂಧಿಯವರನ್ನು ಶ್ಲಾಘಿಸುತ್ತದೆ.

ಇದೊಂದು ಮೈಲಿಗಲ್ಲಾದರೂ, ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಹೆಜ್ಜೆ. ನ್ಯಾಯ ಯೋಧ ರಾಹುಲ್ ಗಾಂಧಿಯವರ ಅಚಲ ನಾಯಕತ್ವದಡಿಯಲ್ಲಿ, ಭಾರತವು ಅತ್ಯುನ್ನತ ಸಾಂವಿಧಾನಿಕ ಉದ್ದೇಶವಾದ ಸಾಮಾಜಿಕ ಪರಿವರ್ತನೆಯನ್ನು ಸಾಕಾರಗೊಳಿಸಲಿದೆ. ತನ್ಮೂಲಕ ನಮ್ಮ ಮಹಾನ್ ದೇಶದಲ್ಲಿ  ಸಮಸಮಾಜವನ್ನು ನಿರ್ಮಿಸಲು ಇದರಿಂದ ಸಾಧ್ಯವಾಗಲಿದೆ.

ನ್ಯಾಯ ಯೋಧರಾದ ರಾಹುಲ್ ಗಾಂಧಿಯವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಷ್ಟ್ರೀಯ ಆಂದೋಲನ 

ಭಾರತೀಯ ಜನಗಣತಿ ಆಯೋಗ, ಅಧಿಕೃತವಾಗಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು, ಭಾರತ (ಒಆರ್‌ಜಿಐ) ಇವರ ವತಿಯಿಂದ   ರಾಷ್ಟ್ರ ಮಟ್ಟದ ಜಾತಿ ಗಣತಿ ಕೈಗೊಳ್ಳುವುದು. ಜನಗಣತಿಯು ಪ್ರತಿ ಜಾತಿ ಮತ್ತು ವ್ಯಕ್ತಿಯ  ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು ಮತ್ತು ತೆಲಂಗಾಣ ರಾಜ್ಯದ ಸೀಪ್ (SEEEP Caste  Survey) ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು.

ಮೀಸಲಾತಿಯನ್ನು ನೀಡಲು ಶೇ 50 ರಷ್ಟಿರುವ ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸೂಕ್ತ  ಮೀಸಲಾತಿಯನ್ನು ಒದಗಿಸಬೇಕು. ಸಂವಿಧಾನದ ಅನುಚ್ಛೇಧ 15(5) ರ ಪ್ರಕಾರ  ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವರದಿಯನ್ನು ಸ್ವೀಕರಿಸದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ

2015 ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಕೇವಲ ಹಿಂದುಳಿದ ವರ್ಗವಲ್ಲದೇ ಎಲ್ಲ ಜನರನ್ನು ಸಮೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದ್ದು, ಆಯೋಗವು ಸಮೀಕ್ಷೆಯನ್ನು ನಡೆಸಿತು. 2018 ರಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೋರಿದರು. ಆಯೋಗದ ಕೋರಿಕೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದರೂ, ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಚನೆ ನೀಡಿದ್ದರ ಬಗ್ಗೆ  ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಜಾತಿಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ

ಸಮ್ಮಿಶ್ರ ಸರ್ಕಾರದಲ್ಲಿ ನಂತರದ ಮೂರು ವರ್ಷ,  ಹತ್ತು ತಿಂಗಳು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಆಯೋಗದ ವರದಿಯನ್ನು ಸ್ವೀಕರಿಸುವುದಾಗಲಿ, ಜಾರಿ ಮಾಡುವ ಬಗ್ಗೆಯಾಗಲಿ ಕೈಹಾಕಲಿಲ್ಲ. ನಂತರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಗಡೆಯವರು ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಿದರು. ಈ ವರದಿಯನ್ನು ನಮ್ಮ ಸಚಿವ ಸಂಪುಟದಲ್ಲಿ ಮಂಡಸಿ ಚರ್ಚಿಸಿದಾಗ, ಸದರಿ ವರದಿಯು ಹತ್ತು ವರ್ಷದ ಹಿಂದಿನ ಸಮೀಕ್ಷೆಯನ್ನು ಆಧರಿಸಿರುವುದರಿಂದ ಪುನ: ಸಮೀಕ್ಷೆ ಮಾಡುವ  ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ.  ಸಚಿವ ಸಂಪುಟದ ನಿರ್ಣಯದಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶದಲ್ಲಿ ಮರುಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆಯೋಗವು ನೀಡಿದ ವರದಿಯನ್ನು ಜಾರಿ ಮಾಡಲಾಗುವುದು ಎಂದು ವಿವರಿಸಿದರು. 1931 ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು ‘ಕರ್ನಾಟಕ ಮಾದರಿ’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧ

ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಅಹಿಂದ ತತ್ವವು ಎಲ್ಲರಿಗೂ ಸಮಪಾಲು, ಸಮಬಾಳು ಎಂಬುದರ ಆಧಾರವಾಗಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ಸಮಾನತೆ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಬೇಕಾಗಿದೆ. ನ್ಯಾಯಯೋಧ ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಜಾತಿಗಣತಿ ಕೇವಲ ಜಾತಿಗಳ ಗಣತಿಯಾಗಿರದೇ, ಅದು ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ.  ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು ರಾಹುಲ್ ಗಾಂಧಿಯವರು  ಕೈಗೊಂಡಿದ್ದಾರೆ ಎಂದರು.

ಕಾಂಗ್ರೆಸ್ ಅಹಿಂದ ಪರ: ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿದ್ದೇವೆ: ಡಾ. ಅನಿಲ್ ಜೈ ಹಿಂದ್

ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ಕಾಂಗ್ರೆಸ್ ಇವರನ್ನು ಬದಲಾಯಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ , AICC ಒಬಿಸಿ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈಹಿಂದ್, ಆ ರೀತಿಯ ಯಾವ ಪ್ರಸ್ತಾಪವೂ ಇಲ್ಲ. ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.vtu

Key words: AICC, Advisory Committee, meeting, Rahul Gandhi, CM Siddaramaiah