ತೆಲಂಗಾಣದ ದಿನಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಯೋಜನೆ ಕುರಿತ ಜಾಹೀರಾತು:ನಿಯಮ ಉಲ್ಲಂಘಿಸಿಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.  

ಬೆಂಗಳೂರು, ನವೆಂಬರ್ 28,2023(www.justkannada.in):  ನವೆಂಬರ್ 30 ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಡುವೆ ತೆಲಂಗಾಣದ ದಿನಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳ ಕುರಿತು ನೀಡಿರುವ ಜಾಹೀರಾತುಗಳು ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಕರ್ನಾಟಕ ಕಾಂಗ್ರೆಸ್ ಸರಕಾರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು  ನೀಡಿತ್ತು.

ದೂರು ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ತೆಲಂಗಾಣದ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದೆ ಜಾಹೀರಾತು ನೀಡಿದ್ದಕ್ಕಾಗಿ ವಿವರಣೆಯನ್ನು ಕೇಳಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಈ ಕುರಿತು ಚುನಾವಣಾ ಆಯೋಗದ ಪತ್ರಕ್ಕೆ ಸರಕಾರ ಪ್ರತಿಕ್ರಿಯಿಸಲಿದೆ. ಕರ್ನಾಟಕ ಸರ್ಕಾರವು ಯಾವುದೇ ‘ಗ್ಯಾರಂಟಿ ಯೋಜನೆ’ಗಳನ್ನು ಜಾರಿಗೆ ತಂದಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಉತ್ತರವಾಗಿ ಸರ್ಕಾರ ಮಾಡಿದ ಕೆಲಸವನ್ನು ಬಿಂಬಿಸುವ ಗುರಿಯನ್ನು ಮಾತ್ರ ಜಾಹೀರಾತುಗಳು ಹೊಂದಿವೆ ಎಂದು ಹೇಳಿದ್ದಾರೆ.

‘ನಾವು ನಿಯಮ ಉಲ್ಲಂಘನೆ ಮಾಡಿಲ್ಲ, ಕರ್ನಾಟಕ ಸರ್ಕಾರ ಯಾರನ್ನೂ ಮತ ಕೇಳಿಲ್ಲ. ನಾವೇನು ​​ಉಲ್ಲಂಘನೆ ಮಾಡಿದ್ದೇವೆ? ನಾವು ಏನು ಕೆಲಸ ಮಾಡಿದ್ದೇವೆಯೋ ಅವುಗಳ ಬಗ್ಗೆ ವಿವಿಧ ರಾಜ್ಯಗಳಿಗೆ ಮಾಹಿತಿ ನೀಡುತ್ತಿದ್ದೇವೆ. ಆ ವಿಚಾರವಾಗಿ ಕರ್ನಾಟಕ, ತಮಿಳುನಾಡು ಅಥವಾ ತೆಲಂಗಾಣದಲ್ಲಿ ಪತ್ರಿಕೆ ಓದುಗರಿಗೆ ಯಾವುದೇ ತೊಂದರೆ ಇಲ್ಲ’ ಎಂದು  ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Advertisement – Telangana -dailies – Karnataka -Govt.’s- scheme-DCM- DK Shivakumar.