ಕಂಠೀರವ ಸ್ಟೇಡಿಯಂನತ್ತ ಹರಿದು ಬರುತ್ತಿರುವ ಅಭಿಮಾನಿಗಳ ದಂಡು: ಅಪ್ಪು ಅಂತಿಮ ದರ್ಶನ ಪಡೆದ ಗಣ್ಯಾತೀಗಣ್ಯರು.

ಬೆಂಗಳೂರು,ಅಕ್ಟೋಬರ್,30,2021(www.justkannada.in): ನಟ ಪುನೀತ್ ರಾಜ್‍ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿರುವ ಕಂಠೀರವ ಕ್ರೀಡಾಂಗಣಕ್ಕೆ  ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳ ದಂಡೇ ಹರಿದುಬರುತ್ತಿದ್ದು ತಮ್ಮ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. 

ನಿನ್ನೆ ರಾತ್ರಿಯಿಂದಲೂ ಎಡೆಬಿಡದಂತೆ ಅಭಿಮಾನಿಗಳು ಎಲ್ಲೆಡೆಯಿಂದ ಆಗಮಿಸುತ್ತಿದ್ದು, ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳೆಲ್ಲ ತುಂಬಿ ಹೋಗಿದೆ.  ಕಾಪೆರ್ರೇಷನ್ ಸರ್ಕಲ್, ಮಲ್ಯ ರಸ್ತೆಸೇರಿದಂತೆ ಎಲ್ಲೆಡೆ ಜನಸಾಗರವೇ ತುಂಬಿದೆ. ನಟ ಪುನೀತ್ ರಾಜ್‍ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಗಣ್ಯರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕಾಗಿ ಬರುತ್ತಿರುವ ಅಭಿಮಾನಿಗಳ ದಂಡನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ನಟ-ನಟಿಯರು, ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಮಂದಿ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದು, ಎಲ್ಲೆಡೆ ಜನರೇ ತುಂಬಿಹೋಗಿದ್ದಾರೆ. ತೆಲುಗು ನಟ ಜೂ.ಎನ್ ಟಿಆರ್ , ನಿರ್ದೇಶಕ ಪ್ರಶಾಂತ್ ನೀಲ್  ಅವರು ಅಂತಿಮ ದರ್ಶನ ಪಡೆದರು. ಈ ವೇಳೆ ನಟ ಜೂ.ಎನ್ ಟಿಆರ್ ಅವರು ನಟ ಶಿವಣ್ಣ ಅವರನ್ನ ತಬ್ಬಿಕೊಂಡು ಸಾಂತ್ವಾನ ಹೇಳಿದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ರೇಣುಕಾಚಾರ್ಯ, ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ನಟ ರವಿಶಂಕರ್,  ಹಿರಿಯ ನಟಿ ಉಮಾಶ್ರೀ,  ನಟಿ ರಾಧಿಕಾ ಕುಮಾರಸ್ವಾಮಿ, ನಟ ಶರಣ್ ಸೇರಿದಂತೆ ಗಣ್ಯಾತೀಗಣ್ಯರು  ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.

Key words: actor-punith raj kumar-death- Fans-  Kanteerava Stadium