ಹೆಲಿಕಾಪ್ಟರ್ ಮನಿ, ಪಬ್ಲಿಕ್ ಟಿವಿ ರಂಗಣ್ಣ, ಶೋಕಾಸ್ ನೋಟಿಸ್ ಇತ್ಯಾದಿ ಕುರಿತು… ವಿಶ್ವೇಶ್ವರ ಭಟ್ ಬರೆದಿದ್ದಾರೆ ಓದಿ…

ಪಬ್ಲಿಕ್ ಟಿವಿ ರಂಗನಾಥ ಅವರ ಬಗ್ಗೆ ಕೆಲವರಿಗೆ ಯಾವ ಪ್ರಮಾಣದ ಅಸೂಯೆ ಇದೆ, ದ್ವೇಷವಿದೆ ಎನ್ನುವುದಕ್ಕೆ ಸದ್ಯದ ‘ಹೆಲಿಕಾಪ್ಟರ್ ಮನಿ‘ ಪ್ರಕರಣವೇ ಸಾಕ್ಷಿ. (ಅದಕ್ಕಿಂತ ಸಾವಿರ ಪಟ್ಟು ಅವರನ್ನು ಇಷ್ಟಪಡುವ ದೊಡ್ಡ ಗುಂಪು, ಸಮೂಹವಿದೆ ಎಂಬುದು ಬೇರೆ ಮಾತು) ನಿನ್ನೆ ಸಾಯಂಕಾಲದಿಂದ ನನಗೆ ಕನಿಷ್ಠ ನೂರು ಜನರಾದರೂ ಪ್ರೆಸ್ ಇನ್ಫಾರ್ಮಶನ್ ಬ್ಯುರೋ ಪಬ್ಲಿಕ್ ಟಿವಿಗೆ ನೀಡಿದ ಶೋಕಾಸ್ ನೋಟೀಸನ್ನು ವಾಟ್ಸಾಪ್ ನಲ್ಲಿ ಫಾರ್ವರ್ಡ್ ಮಾಡಿರುವುದೇ ಸಾಕ್ಷಿ.

ರಂಗಣ್ಣ ಮಾಡಬಾರದ ಘನಘೋರ ತಪ್ಪನ್ನು ಮಾಡಿದ್ದಾರೆ ಎಂಬ ರೀತಿಯಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಈ ಶೋಕಾಸ್ ನೋಟಿಸ್ ಪ್ರತಿಯನ್ನು ಫಾರ್ವರ್ಡ್ ಮಾಡಿದ್ದೇ ಮಾಡಿದ್ದು. ರಂಗಣ್ಣನಿಗೆ ತಕ್ಕ ಶಾಸ್ತಿಯಾಯ್ತು ಎಂದು ಕೆಲವರು ಸಂಭ್ರಮಿಸುತ್ತಿದ್ದರು.

ಒಂದು ಕ್ಷಣ ನನಗೆ ಅನಿಸಿದ್ದೇನೆಂದರೆ, ನಮ್ಮ ಅಕ್ಕ ಪಕ್ಕ ನಿಂತವರೇ ನಮ್ಮ ತಲೆ ಮೇಲೆ ಚಪ್ಪಡಿ ಕಲ್ಲನ್ನು ಎಳೆಯಲು ಸಮಯ ಕಾಯುತ್ತಿರುತ್ತಾರಲ್ಲ ಎಂದು. ಕಾರಣ ಈ ರೀತಿ ಶೋಕಾಸ್ ನೋಟೀಸ್ ಪ್ರತಿ ಫಾರ್ವರ್ಡ್ ಮಾಡುತ್ತಿದ್ದವರಲ್ಲಿ ಪತ್ರಕರ್ತರೇ ಮುಂಚೂಣಿಯಲ್ಲಿ ಇದ್ದರು. ಕೆಲವರಂತೂ ಅಷ್ಟರೊಳಗೆ ರಂಗಣ್ಣನ ಚಾನೆಲ್ ಬ್ಯಾನ್ ಮಾಡಲು ಇದು ಸಕಾಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಷರಾ ಬರೆದುಬಿಟ್ಟಿದ್ದರು.

ಇಷ್ಟೆಲ್ಲಾ ಆದ ನಂತರ, ನಾನು ‘ಹೆಲಿಕಾಪ್ಟರ್ ಮನಿ’ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ವಿಡಿಯೋ ಕ್ಲಿಪ್ ನೋಡಿದೆ. ಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲಿ ಹಾಕಿದ ಸುದ್ದಿಯನ್ನೂ ಓದಿದೆ. ಮೋದಿಯವರು ಹೆಲಿಕಾಪ್ಟರ್ ನಲ್ಲಿ ಮೂಟೆಗಟ್ಟಲೆ ಹಣ ತಂದು ಆಕಾಶದಿಂದ ಜನರ ಮೇಲೆ ಬೀರುತ್ತಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿರಬಹುದೆಂದೂ, ಅದಕ್ಕೆ ಜನ ಪಬ್ಲಿಕ್ ಟಿವಿಯನ್ನು ಟೀಕಿಸುತ್ತಿರಬಹುದೆಂದೂ ನಾನು ಭಾವಿಸಿದ್ದೆ. ಆದರೆ ಪಬ್ಲಿಕ್ ಟಿವಿ ವರದಿಯಲ್ಲಿ ಅಂಥ ಯಾವ ಉಲ್ಲೇಖವೂ ಇರಲಿಲ್ಲ. ಹಾಗೆ ಆಗಬಹುದಾ, ಹೀಗೆ ಆಗಬಹುದಾ ಎಂಬ ಪ್ರಶ್ನೆಗಳಿಗೆ ಅಂಥದ್ದೇನೂ ಆಗುವುದಿಲ್ಲ, ಹೆಲಿಕಾಪ್ಟರ್ ಮನಿ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯದೊಂದಿಗೆ ಆ ಸುದ್ದಿ ಮುಗಿಯುತ್ತದೆ.

ಆದರೆ ಯಾರೋ ಕಿಡಿಗೇಡಿಗಳು selective pick ಮಾಡಿ, ಮೂರ್ನಾಲ್ಕು ಸ್ಕ್ರೀನ್ ಶಾಟ್ ಗಳನ್ನಿಟ್ಟುಕೊಂಡು ಪಬ್ಲಿಕ್ ಟಿವಿಯನ್ನು ಟೀಕಿಸುತ್ತಿದ್ದಾರೆ ಮತ್ತು ಶೋಕಾಸ್ ನೋಟೀಸ್ ನೀಡಿದ್ದನ್ನು ಸಂಭ್ರಮಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು.

ಇಲ್ಲಿ ಒಂದು ಸಂಗತಿ ಗಮನಿಸಬೇಕು. ಪ್ರೆಸ್ ಇನ್ಫಾರ್ಮಶನ್ ಬ್ಯುರೋ ಎಡಿಜಿ (Additional Director General ) ನಾಗೇಂದ್ರ ಪ್ರಸಾದ ಅವರೂ ಸಹ ಸೋಶಿಯಲ್ ಮೀಡಿಯಾಗಳ ಪ್ರಭಾವದಿಂದ ಪಬ್ಲಿಕ್ ಟಿವಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆಂಬುದು ಸ್ಪಷ್ಟ. ಅವರೂ ಸಹ ಹಿಂದೆ ಮುಂದೆ ಯೋಚಿಸದೇ ಹೀಗೆ ಮಾಡಿದ್ದು ತಪ್ಪು. ರಂಗಣ್ಣ ಆ ನೋಟೀಸ್ ಗೆ ಉತ್ತರ ಕೊಡುತ್ತಾರೆ ಆನಂತರ ಈ ಪ್ರಕರಣ ಅಲ್ಲಿಗೆ ಮುಗಿಯುತ್ತದೆ, ಅದು ಬೇರೆ ಪ್ರಶ್ನೆ. ಆದರೆ ಮಾಧ್ಯಮ ಸಂಸ್ಥೆಯನ್ನು ಬೆದರಿಸುವ, ನಿಯಂತ್ರಿಸುವ ಸಣ್ಣ ಪ್ರಯತ್ನ ಸಹ ಪ್ರಶ್ನಾರ್ಹವೇ.

ಗೊತ್ತಿರಲಿ, ರಂಗಣ್ಣ ನಿನ್ನೆ ಮೊನ್ನೆ ಪತ್ರಿಕೋದ್ಯಮಕ್ಕೆ ಬಂದವರಲ್ಲ. ಅವರ ವೃತ್ತಿನಿಷ್ಠೆ ಪ್ರಶ್ನಾತೀತ. ತಾವೇನು ಎಂಬುದನ್ನು ಅವರು ಕರ್ನಾಟಕದ ಜನತೆ ಎದುರು ದಿನಾ ದಿನ ಸಾಬೀತು ಮಾಡಬೇಕಿಲ್ಲ. ಅದನ್ನು ಅವರು ಈಗಾಗಲೇ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರ ‘ಬ್ರಾಂಡ್ ಆಫ್ ಜರ್ನಲಿಸಂ‘ ನ್ನು ರಾಜ್ಯದ ಜನತೆ ನೋಡಿದ್ದಾರೆ. ಒಬ್ಬ ಸಾಮಾನ್ಯ ಪತ್ರಕರ್ತರಾಗಿ ಅವರು ವೃತ್ತಿಯಲ್ಲಿ ಬೆಳೆದ ರೀತಿ ಅನುಕರಣೀಯ. ಇಂದು ನಮ್ಮ ರಾಜ್ಯದ ಮನೆಮಾತಾಗಿರುವ ಪಬ್ಲಿಕ್ ಟಿವಿಯನ್ನು ಅವರು ಕಟ್ಟಿದ ರೀತಿ ನಿಜಕ್ಕೂ ಒಂದು ದೊಡ್ಡ ಸಾಹಸಗಾಥೆಯೇ . ಇಂದು ಅವರು ಮುನ್ನೂರಕ್ಕೂ ಹೆಚ್ಚು ಪತ್ರಕರ್ತರಿಗೆ ಉದ್ಯೋಗ ನೀಡಿದ್ದಾರೆ. ಅವರ ಎಲ್ಲ ನಿಲುವು – ಅಭಿಪ್ರಾಯಗಳನ್ನು ಒಪ್ಪಬೇಕೆಂದಿಲ್ಲ. ಅವರು ಹೇಳಿದ್ದನ್ನೆಲ್ಲ ಸ್ವೀಕರಿಸಲೇಬೇಕೆಂದಿಲ್ಲ.

ಆದರೆ ಅವರ ಪತ್ರಿಕೋದ್ಯಮ ಸಾಮರ್ಥ್ಯ, ಕಾಮನ್ ಸೆನ್ಸ್ ನ್ನು ಪ್ರಶ್ನೆ ಮಾಡುವುದು ಸರಿ ಅಲ್ಲ. ಮೋದಿ ಹೆಲಿಕಾಪ್ಟರಿನಿಂದ ಹಣ ತಂದು ಚೆಲ್ಲುತ್ತಾರೆ, ಆ ಮೂಲಕ ಜನರ ಬಡತನ ದೂರ ಮಾಡುತ್ತಾರೆ ಎಂದು ಪ್ರಸಾರ ಮಾಡುವಷ್ಟು ಮೂರ್ಖರಂತೂ ಅವರಲ್ಲ. ಅಷ್ಟಾಗಿಯೂ ಸುದ್ದಿಯನ್ನು ನಿರೂಪಿಸುವಾಗ (Presentation) ಸಣ್ಣ ಪುಟ್ಟ ದೋಷಗಳಾಗುವುದು ಅಸಹಜವೇನಲ್ಲ. ಅಷ್ಟಕ್ಕೇ ಅವರ ಮೇಲೆ ಚಪ್ಪಡಿ ಕಲ್ಲು ಎಳೆಯುವ ಮನಸ್ಥಿತಿ ಆರೋಗ್ಯಕರ ಅಲ್ಲ.

ಇಂಥ ಬಿಕ್ಕಟ್ಟಿನ ಸಮಯದಲ್ಲೂ ಮನೆ – ಮಠ ಬಿಟ್ಟು ಸದಾ ಆಫೀಸಿನಲ್ಲಿಯೇ ಬಿದ್ದುಕೊಂಡು, ಇಷ್ಟೆಲ್ಲಾ ಜನ ಪತ್ರಕರ್ತರನ್ನು ತನ್ನ ಜತೆ ಕಟ್ಟಿಕೊಂಡು, ಅನವರತ ಹೆಣಗುವ ಒಬ್ಬ ಪತ್ರಕರ್ತನ ಹೋರಾಟ, ಪರಿಶ್ರಮವನ್ನು ನೋಡಿ ಮೆಚ್ಚೋಣ. ಆತನ ತಲೆ ಮೇಲೆ ಪಿಷ್ಠಿ ಇಡುವುದಕ್ಕೆ ಹೊಂಚು ಹಾಕಿ ಕುಳಿತುಕೊಳ್ಳುವ ಸಣ್ಣ ಬುದ್ಧಿ ಯಾರಿಗೂ ಒಳ್ಳೆಯದಲ್ಲ. ಅದರಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ.

ಇಂದು ಮಾಧ್ಯಮ ರಂಗ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಪತ್ರಕರ್ತರು ಏಕಾಏಕಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂದು ಒಂದು ಮಾಧ್ಯಮ ಸಂಸ್ಥೆಯನ್ನು ನಡೆಸುವುದು ಬಹಳ ದೊಡ್ಡ ರಿಸ್ಕ್ ಮತ್ತು Thankless job. ಹೀಗಿರುವಾಗ ಒಂದು ಮಾಧ್ಯಮ ಸಂಸ್ಥೆಯನ್ನು ಅಥವಾ ಒಬ್ಬ ರಂಗಣ್ಣನನ್ನು ಅನಗತ್ಯ ಹಳಿದರೆ, ಮನಸ್ಸನ್ನು ಚುಚ್ಚಿ ಘಾಸಿ ಮಾಡಿದರೆ, ಎಲ್ಲೋ ನಮ್ಮ ದನಿಯೇ ಕ್ಷೀಣವಾಗುತ್ತದೆ ಎಂಬ ಸಮಷ್ಠಿ ಪ್ರಜ್ಞೆ ನಮ್ಮಲ್ಲಿರಬೇಕು.

ಇಂಥ ಪ್ರಸಂಗಗಳಾದಾಗಲೆಲ್ಲ ದೂರದಲ್ಲಿ ನಿಂತು ಕಲ್ಲು ಹೊಡೆಯುವುದರಿಂದ ರಂಗಣ್ಣ ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಅದರ ಮೂಗೇಟು ಅನುಭವಿಸುವವರು ಮಾತ್ರ ನಾವು ಎಂಬ ಸೂಕ್ಷ್ಮ ತಿಳಿವಳಿಕೆ ನಮಗಿದ್ದರೆ ಸಾಕು.