ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್‍ ಟಿ ರದ್ದುಗೊಳಿಸಿ –ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ.

ಬೆಂಗಳೂರು,ಜುಲೈ,16,2022(www.justkannada.in): ಕೇಂದ್ರ ಸರಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗಗಳು ಹೈರಾಣಾಗಿರುವಾಗ ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5 ರಷ್ಟು ಜಿಎಸ್‍ ಟಿ ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್‍ಟಿಯನ್ನು ತಕ್ಷಣದಿಂದಲೇ ರದ್ದುಗೊಳಿಸಲು ಒತ್ತಾಯಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದ ಸಾರಾಂಶ ಹೀಗಿದೆ..

ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂ ಗಳಿಕೆ ಇರುವುದಿಲ್ಲ ಎನ್ನುವ ಕಾಮನ್ ಸೆನ್ಸ್ ಕೂಡ ಡಬ್ಬಲ್ ಎಂಜಿನ್ ಸರ್ಕಾರಗಳಿಗೆ ಇದ್ದಂತಿಲ್ಲ. ಬಿಜೆಪಿ ಸರ್ಕಾರಗಳು ಜನತೆಯನ್ನು ಶತ್ರುಗಳೆಂದು ಭಾವಿಸಿ ಕೆಲಸ ಮಾಡುತ್ತಿವೆ ಎಂಬುದಕ್ಕೆ ಇದು ಉದಾಹರಣೆ.

ಮಂಡಕ್ಕಿ ಉತ್ಪಾದನೆಗೆ ತಗಲುವ ವೆಚ್ಚ, ಮಾರಾಟ ವೆಚ್ಚಕ್ಕಿಂತ ಹೆಚ್ಚಾಗಿದೆ. ಮಂಡಕ್ಕಿ ಉತ್ಪಾದಿಸಿ ಅದು ಗ್ರಾಹಕರ ಕೈಗೆ ತಲುಪುವವರೆಗೂ ಬೆಲೆಗಳ ಏರಿಳಿತ ಅತಿ ಸಾಮಾನ್ಯ ಅಗಿ ಬಿಟ್ಟಿದೆ. ಮಳೆಗಾಲದಲ್ಲಿ ಮಂಡಕ್ಕಿ ಉತ್ಪಾದನೆಗೆ ನಾನಾ ತೊಂದರೆಗಳಿವೆ. ಅಕ್ಕಿ ಒಣಗಿರುವುದಿಲ್ಲ, ಭತ್ತದ ಬೆಲೆ ಗಗನಕ್ಕೆ ಏರಿರುತ್ತದೆ. ಮಾರಾಟವೂ ಕುಸಿದಿರುತ್ತದೆ.

ಮಳೆಗಾಲದಲ್ಲಿ ಅಕ್ಕಿ ನೆನೆದರೆ ಮಂಡಕ್ಕಿ ಭಟ್ಟಿಗಳನ್ನು ವಾರಗಟ್ಟಲೆ ಮುಚ್ಚಬೇಕಾಗುತ್ತದೆ. ಭಟ್ಟಿ ಮುಚ್ಚಿದರೆ ಮಂಡಕ್ಕಿ ಕಾರ್ಮಿಕರಿಗೆ ಬೇರೆ ಕಡೆ ಕೂಲಿ ಕೆಲಸ ಸಿಗುವುದಿಲ್ಲ. ಒಂದು ಹೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು ಪರದಾಡಬೇಕಾಗುತ್ತದೆ. ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದಿದ್ದರೂ ಮಂಡಕ್ಕಿ ಮತ್ತಿತರ ಸಣ್ಣ-ಪುಟ್ಟ ಬಡವರ ಆಹಾರ ಉತ್ಪಾದನೆ ಮೇಲೆ ಜಿಎಸ್‍ ಟಿ ವಿಧಿಸುತ್ತಿರಲಿಲ್ಲ.ದಾವಣಗೆಯೊಂದರಲ್ಲೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮಂಡಕ್ಕಿ ಉತ್ಪಾದನೆಯನ್ನೆ ನೆಚ್ಚಿಕೊಂಡಿವೆ.

ಇವರ ಅನ್ನದ ತಟ್ಟೆಗೆ ಕೈ ಹಾಕಿ ತುತ್ತು ಅನ್ನವನ್ನೂ ಕಿತ್ತುಕೊಳ್ಳುವುದು ಅಮಾನವೀಯ ಸಂಗತಿ. ದಾವಣಗೆರೆ ಮತ್ತಿತರ ಕಡೆಯ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದವರು ನನ್ನನ್ನು ಭೇಟಿಯಾಗಿ ಮಂಡಕ್ಕಿಗೂ ಜಿಎಸ್‍ ಟಿ ವಿಧಿಸಿರುವುದರಿಂದ ಆಗಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Key words: Abolish-GST – mandakki -production –former CM-Siddaramaiah