ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು- ನ್ಯಾ. ಅಭಯ್ ಮನೋಹರ್ ಸಪ್ರೆ

ಮೈಸೂರು,ಡಿಸೆಂಬರ್,20,2025 (www.justkannada.in): ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ   ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ನ ರಸ್ತೆ ಸುರಕ್ಷತಾ  ಸಮಿತಿ ಅಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾ.ಅಭಯ್ ಮನೋಹರ್ ಸಪ್ರೆ,  ರಸ್ತೆ ಅಪಘಾತದಲ್ಲಿ ಯಾವುದೇ ಉದ್ದೇಶವಿಲ್ಲದೆ ಅಂದಾಜು ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು ಮರಣ ಹೊಂದುತ್ತಾರೆ ಎಂದರೆ ಇದು ಚಿಂತಿಸುವ ವಿಷಯವಾಗಿದೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು ಎಂಬುವುದು ಸಾಮಾನ್ಯ ಜ್ಞಾನ. ಇದಕ್ಕೆ ಯಾವುದೇ ಪದವಿ ಬೇಡ. ಹೆಚ್ಚು ವಿದ್ಯಾವಂತರು ಸಹ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವ ಉದಾಹರಣೆಗಳಿವೆ.  ಸಾರ್ವಜನಿಕರು  ಕಡ್ಡಾಯವಾಗಿ ಸಂಚಾರಿ ನಿಯಮ ಪಾಲನೆ ಮಾಡುವ ರೀತಿ ಮನಸ್ಥಿತಿ ಬದಲಾವಣೆ ಮಾಡಬೇಕು. ಇದಕ್ಕೆ ಇರುವ ದಾರಿ ಎಂದರೆ ಒಂದು ಜಾಗೃತಿ ಮೂಡಿಸುವುದು ಇನ್ನೊಂದು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸುವುದು ಎಂದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ ಅವರು 2020 ರಿಂದ 2025 ರವರೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು, ಮರಣ ಹೊಂದಿದವರ ಸಂಖ್ಯೆ, ಗುರುತಿಸಿರುವ ಬ್ಲ್ಯಾಕ್ ಸ್ಪಾಟ್ ಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Zero number, road accidents, goal, Justice, Abhay Manohar Sapre, Mysore