Sunday, August 9, 2026

BDA Apartments

Home Cinema ” ಪುನೀತ್ ರಾಜ್‍ಕುಮಾರ್ ರಸ್ತೆ ” ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ.

” ಪುನೀತ್ ರಾಜ್‍ಕುಮಾರ್ ರಸ್ತೆ ” ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ.

ಬೆಂಗಳೂರು,ಫೆಬ್ರವರಿ,17,2022(www.justkannada.in): ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್” ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ  ” ಪುನೀತ್  ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಾಗಿದ್ದು ಈ ಕುರಿತು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧಿಕೃತ ಅನುಮೋದನೆ ನೀಡಿದ್ದಾರೆ.

ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 14 ಬಿಬಿಎಂಪಿ ವಾರ್ಡ್ ಗಳನ್ನು ಹಾದುಹೋಗುವ – “ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ – (ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರ) – ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್” ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ  ” ಪುನೀತ್  ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡುವ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್. ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ನೀಡಿದ್ದ ಮನವಿ ಪತ್ರವನ್ನು ಪುರಸ್ಕರಿಸಿ – ನಿಯಮಾನುಸಾರ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಂಧ ಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳಿಗೆ ಕೂಡಲೇ ಕ್ರಮ ತೆಗೆದುಕೊಂಡು ಕಡತವನ್ನು ಮಂಡಿಸುವಂತೆ ಆದೇಶಿಸಿದ್ದರು.

ಅದರಂತೆ, ಸದರಿ ರಸ್ತೆಯ ನಕ್ಷೆಯನ್ನು ತಯಾರಿಸಿ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಿದ ನಂತರ ಸುಮಾರು 700 ಕ್ಕೂ ಹೆಚ್ಚು ಮಂದಿ ಹಾಗೂ ಸದರಿ ರಸ್ತೆಗೆ ಹೊಂದಿಕೊಂಡಂತಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು ಮತ್ತು ಯಾರೊಬ್ಬರೂ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ – ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ” ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.

ವಿಶೇಷವೆಂದರೆ, ಗೊರಗುಂಟೆ ಪಾಳ್ಯದಿಂದ (ಡಾ ll ರಾಜ್ ಕುಮಾರ್ , ಪಾರ್ವತಮ್ಮ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗಳು ಇರುವ ರಸ್ತೆ)  ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರ ಏಪ್ರಿಲ್ 08 ರಂದು ” ಡಾll ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ” ಎಂದು ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು.

ಈಗ ಇದರ ಮುಂದುವರೆದ ಭಾಗವಾಗಿ ನಾಯಂಡಹಳ್ಳಿ ಜಂಕ್ಷನ್ ನಿಂದ  ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ ವರ್ತುಲ ರಸ್ತೆಗೆ ” ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡಲಾಗುತ್ತಿದೆ.

ಆದಷ್ಟು ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ” ಪುನೀತ್ ರಾಜ್‍ಕುಮಾರ್ ರಸ್ತೆ ” ಯ ನಾಮಕರಣ ಸಮಾರಂಭವನ್ನು ಅಣ್ಣಾವ್ರ ಕುಟುಂಬದ ಎಲ್ಲಾ ಸದಸ್ಯರ ಹಾಜರಾತಿಯಲ್ಲಿ ಏರ್ಪಡಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ  ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್ ಆರ್ ತಿಳಿಸಿದ್ದಾರೆ.

Key words: BBMP- approval – Punith Rajkumar -road -name