ಹಾವೇರಿ ಜಿಲ್ಲೆಯಲ್ಲಿ ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ – ಸಚಿವ ಡಾ. ನಾರಾಯಣಗೌಡ.

ಹಾವೇರಿ, ಆಗಸ್ಟ್,31,2021(www.justkannada.in): ಹಾವೇರಿ ಜಿಲ್ಲೆ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಸಚಿವ ಡಾ. ನಾರಾಯಣಗೌಡ ಸಂತಸದ ಸುದ್ದಿ ನೀಡಿದ್ದಾರೆ‌. ರೇಷ್ಮೆ ಗೂಡು ಮಾರಾಟಕ್ಕೆ ಇನ್ನುಮುಂದೆ ರೈತರು ಬೇರೆ ಜಿಲ್ಲೆಗೆ ಅಲೆಯಬೇಕಾಗಿಲ್ಲ. ಹಾವೇರಿ ಜಿಲ್ಲೆಯಲ್ಲೇ ಹೈಟೆಕ್ ರೇಷ್ಮೆ ಮಾರಕಟ್ಟೆ ನಿರ್ಮಿಸಲು ನಿವೇಶನ ಗುರುತಿಸಿ ವಾರದೊಳಗೆ ವರದಿ ನೀಡಿ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಹಾವೇರಿ ಜಿಲ್ಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಾರಾಯಣಗೌಡ,  ಹಾವೇರಿ ಅಥವಾ ರಾಣೆಬೆನ್ನೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರತಿನಿತ್ಯ ಒಂದು ಮೆಟ್ರಿಕ್ ಟನ್ ರೇಷ್ಮೆ ಗೂಡು ಮಾರಾಟವಾಗುತ್ತಿದೆ. 2-3 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನ ರಾಮನಗರ, ಶಿಡ್ಲಘಟ್ಟ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವಾರದೊಳಗೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಸರ್ವೆ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.‌

ಹಾವೇರಿಯಲ್ಲಿ ರೇಷ್ಮೆ ಬೆಳೆ ಉತ್ತಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ  ಬೆಳೆಗಾರರ ಸಂಖ್ಯೆ ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ ಅಗತ್ಯವಿದ್ದು, ಶೀಘ್ರವೇ ಈ ಸಂಬಂಧ ಕ್ರಮ ವಹಿಸುವುದಾಗಿ ಸಚಿವ ನಾರಾಯಣಗೌಡ ಹೇಳಿದರು.

ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಸುಮ್ಮನೆ ಬಿಡಲ್ಲ

ರೇಷ್ಮೆ ಇಲಾಖೆ ಅಡಿ ರೇಷ್ಮೆ ರೈತರಿಗೆ ರೇಷ್ಮೆ ಮನೆಗಳನ್ನು ನೀಡುತ್ತಿದ್ದೇವೆ. ಆದರೆ ಕೆಲ ಅಧಿಕಾರಿಗಳು ಕಮಿಷನ್ ನೀಡದೆ ಮನೆ ನೀಡುತ್ತಿಲ್ಲ. ಬಡವರಿಗೆ ನೀಡುವ ಮನೆ ಅದು. ಕಷ್ಟದಲ್ಲಿರುವ ಕಾರಣಕ್ಕೇ ಮನೆ ನೀಡುವುದು. ಆದರೆ ಅಂತವರಿಂದಲೇ ಅಧಿಕಾರಿಗಳು ಲಂಚ ಕೇಳುತ್ತಾರೆ. ಇಂತಹ ಅಧಿಕಾರಿಗಳನ್ನು ಮನೆಗೆ ಕಳಿಸುತ್ತೇನೆ. ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಾರೆ. ಡ್ರಿಪ್ ಇರಿಗೇಶನ್ ಗೂ ಕಮೀಷನ್ ಕೇಳ್ತಾರೆ‌. ಇದೆಲ್ಲದಕ್ಕು ಬ್ರೇಕ್ ಹಾಕಬೇಕು. ರೈತರ ರಕ್ತ ಕುಡಿಯುವವರನ್ನು ಬಿಡಲ್ಲ. ರೈತರಿಗೆ ಸಂಬಂಧಿಸಿದ ಯಾವುದೇ ಯೋಜನೆ ನೇರವಾಗಿ ಅವರಿಗೆ ತಲುಪಬೇಕು. ಅಧಿಕಾರಿಗಳು ಕಮಿಷನ್ ಕಾರಣಕ್ಕೆ ವಿಳಂಬ ಮಾಡಿದರೆ ಸುಮ್ಮನಿರಲ್ಲ ಎಂದು ಸಚಿವ ಡಾ. ನಾರಾಯಣಗೌಡ ಖಡಕ್ ಎಚ್ಚರಿಕೆ ನೀಡಿದರು.

0% ಇ-ಪೇಮೆಂಟ್ ಗೆ ಸಚಿವರು ಗರಂ

ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ 100% ಇ-ಪೇಮೆಂಟ್ ಆಗಬೇಕು ಎಂದು ಸೂಚನೆ ನೀಡಲಾಗಿದೆ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಾದರೂ ನಡೆಯುತ್ತಿದೆ. ಆದರೆ ಹಾವೇರಿ ರೇಷ್ಮೆ ಮಾರುಕಟ್ಟೆಯಲ್ಲಿ 0% ಇ-ಪೇಮೆಂಟ್‌ ಇದೆ. ಆನ್ಲೈನ್ ಪೇಮೆಂಟ್ ಆರಂಭ ಮಾಡಲೇ ಇಲ್ಲ. ಸಿಲ್ಕು ಮತ್ತು ಮಿಲ್ಕು ರೈತರ ಜೀವನಾಧಾರ. ಇದರಲ್ಲಿ ಅನ್ಯಾಯವಾಗಬಾರದು. ಮಾರುಕಟ್ಟೆಯಲ್ಲಿ ನಗದು ವ್ಯವಹಾರ ನಿಲ್ಲಬೇಕು. ತಕ್ಷಣ ಇ-ಪೇಮೆಂಟ್ ಪ್ರಾರಂಭಿಸಬೇಕು. ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ನಿಲ್ಲಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗಳನ್ನು ಸಚಿವ ನಾರಾಯಣಗೌಡ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ-ಸಮಸ್ಯೆಗಳ ಪರಿಹಾರಕ್ಕೆ ಸೂಚನೆ

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಕೂಡಲೆ ಉತ್ತಮ ಅಧಿಕಾರಿಯನ್ನು ತಾತ್ಕಾಲಿಕ ನೇಮಿಸುವಂತೆ ಸಚಿವರು ಸೂಚಿಸಿದರು‌. ಹಾವೇರಿಯಲ್ಲಿರುವ ಈಜುಕೊಳ ವ್ಯವಸ್ಥೆ ಹದಗೆಟ್ಟಿರುವುದಕ್ಕೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಖಾಸಗಿಯವರಿಗೆ ಈಜುಕೊಳ ನಿರ್ವಹಣೆಗೆ ನೀಡಬೇಕು. ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಈಜುಪಟುಗಳಿಗೆ ಸೂಕ್ತ ತರಬೇತಿ ನೀಡುವುದಕ್ಕೆ ಈಜುಕೊಳ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಇದು ಅಧಿಕಾರಿಗಳ ಜವಾಬ್ದಾರಿ ಎಂದು ಸಚಿವ ನಾರಾಯಣಗೌಡ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕು ಮುನ್ನ ಸಚಿವ ನಾರಾಯಣಗೌಡ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದೆ. ತಕ್ಷಣ ದುರಸ್ತಿ ಕಾರ್ಯ ಆಗಬೇಕು. ಕೂಡಲೆ ಕ್ರೀಡಾಂಗಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ -19 ಹಿನ್ನೆಲೆಯಲ್ಲಿ ಈಜುಕೊಳ, ಕ್ರೀಡಾಂಗಣ ಎಲ್ಲ ಸ್ಥಗಿತಗೊಳಿಸಲಾಗಿತ್ತು. ಶೀಘ್ರದಲ್ಲೆ ಪುನಾರಂಭ ಮಾಡುತ್ತೇವೆ. ಎಲ್ಲ ದುರಸ್ಥಿಕಾರ್ಯ ಮುಗಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ನೆಹರು ಓಲೇಕಾರ್, ವಿರುಪಾಕ್ಷಪ್ಪ ಬಳ್ಳಾರಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿ. ಅಮರಶೆಟ್ಟಿ, ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.‌

Key words: Construction – new high-tech- silk market -Haveri district-Minister – Narayana Gowda.