Wednesday, August 12, 2026

BDA Apartments

Home Front Page ಅಮಿತ್ ಶಾ ಕಾರ್ಯಕ್ರಮದಲ್ಲಿ ಕನ್ನಡ ಸಂಪೂರ್ಣ ಕಡೆಗಣನೆ: ಮಾಜಿ ಸಿಎಂ ಎಚ್ಡಿಕೆ ಆಕ್ರೋಶ

ಅಮಿತ್ ಶಾ ಕಾರ್ಯಕ್ರಮದಲ್ಲಿ ಕನ್ನಡ ಸಂಪೂರ್ಣ ಕಡೆಗಣನೆ: ಮಾಜಿ ಸಿಎಂ ಎಚ್ಡಿಕೆ ಆಕ್ರೋಶ

ಬೆಂಗಳೂರು, ಜನವರಿ 17, 2021 (www.justkannada.in): ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ರಾಜ್ಯ ಸರಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಚ್ಡಿಕೆ ಮಾಡಿರುವ ಟೀಟ್ ಸರಣಿಗಳು ಇಲ್ಲಿವೆ….

ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ RAF ಘಟಕಕ್ಕೆ ಗೃಹಸಚಿವರಾದ ಅಮಿತ್ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ. ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ.

ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು,ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಗೃಹ ಸಚಿವರೆ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ,ಕನ್ನಡಿಗರಿಗೆ ಮಾಡಿದ ಅಗೌರವ.ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ.

ಹಿಂದಿ-ಆಂಗ್ಲ ಭಾಷೆಯ ನಿಷ್ಠ ಧೋರಣೆಯಲ್ಲಿ ಕನ್ನಡ ಭಾಷೆಯನ್ನು ಅವಗಣನೆ ಮಾಡಿರುವ ಅಮಿತ್ ಷಾ ಅವರ ಧೋರಣೆ ಕನ್ನಡ ವಿರೋಧಿತನವನ್ನು ತೋರಿಸುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ RAF ಘಟಕ ಸ್ಥಾಪನೆಗೆ ಕನ್ನಡದ ನೆಲವನ್ನೆ ಕೊಟ್ಟಿದ್ದು, ಈ ಪರಿಜ್ಞಾನವಿಲ್ಲದೆ ಕನ್ನಡದಲ್ಲಿ ಅಡಿಗಲ್ಲು ಫಲಕ ಇಲ್ಲದಿರುವುದು ಅಕ್ಷಮ್ಯ. ಅಮಿತ್ ಷಾ ಅವರು ತ್ರಿಭಾಷಾ ಸೂತ್ರ ಉಲ್ಲಂಘಿಸಿರುವುದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು.

ನಾಡು-ನುಡಿಯ ಘನತೆಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವವರಿಗೆ ಈ ರಾಜ್ಯದ ಆಡಳಿತ ನಡೆಸುವ ಅರ್ಹತೆ ಇಲ್ಲ. ಕೇಂದ್ರದ ಗೃಹಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ.