ಮೈಸೂರು,ಅಕ್ಟೋಬರ್,1,2020(www.justkannada.in):  ಮೈಸೂರು ದಸರಾಗೆ ಪಾಲಿಕೆಯಿಂದ ಸಿದ್ಧತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ,  ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ ‘ಚಾಕೊಲೇಟ್’ ಕೊಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮೈಸೂರು ಮೇಯರ್ ತಸ್ನೀಂ, ಮೈಸೂರು ದಸರಾ ಆಚರಣೆಗೆ ಸರಕಾರ 10 ಕೋಟಿ ಅನುದಾನ ನೀಡಿದೆ. ಆದರೆ ಅನುದಾನ ಹಂಚಿಕೆಯ ಯಾವುದೇ ರೂಪುರೇಷೆ ನೀಡಿಲ್ಲ. ಪಾಲಿಕೆ ಪಾತ್ರವನ್ನು ತಿಳಿಸಿಲ್ಲ. ಹಾಗಾಗಿ ಸರಳ ದಸರಾದಲ್ಲಿ ಶೇ.90ರಷ್ಟು ಪಾಲಿಕೆಯ ಪಾತ್ರವಿಲ್ಲ. ಸರ್ಕಾರ ಘೋಷಣೆ ಮಾಡಿರುವ 10ಕೋಟಿಯನ್ನು ನಮಗೆ ನೀಡಿ ಎಂದು ಕೇಳಿದ್ವಿ. ಆದರೆ ಕೇವಲ ಎರಡು ಮುಕ್ಕಾಲು ಕೋಟಿ ನೀಡುವ ಮಾಹಿತಿ ಇದೆ. ಆದರೆ 65 ವಾರ್ಡ್ ಗಳನ್ನೊಂದಿರುವ ಪಾಲಿಕೆಗೆ ಆ ಹಣ ಸಾಕಾಗುವುದಿಲ್ಲ. ಹಾಗಾಗಿ ಪಾಲಿಕೆಯಿಂದಲೇ ಪ್ರತೀ ವಾರ್ಡಿಗೆ 10ಲಕ್ಷ ರೂ. ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇನೆ. ಆ ಮೂಲಕ ವಾರ್ಡ್ ಗಳ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡುತ್ತೇವೆ ಎಂದು ಮೇಯರ್ ತಸ್ನೀಂ ತಿಳಿಸಿದರು.
ಕುದುರೆ ಸವಾರಿ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ.
ಜಂಬೂಸವಾರಿ ವೇಳೆ ಮೈಸೂರಿನ ಮೊಲದ ಪ್ರಜೆ ಕುದುರೆ ಏರುವ ವಿಚಾರ ಕುರಿತು ಪ್ರತಿಕ್ರಿಯಿಸಿದ  ಮೇಯರ್ ತಸ್ನೀಂ, ಕುದುರೆ ಸವಾರಿ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ. ದಸರಾ ಮಹೋತ್ಸವದ ಒಂದು ತಿಂಗಳು ಮುಂಚಿತವಾಗಿಯೇ ತರಬೇತಿ ಪಡೆಯುವಂತೆ ಸೂಚನೆ ನೀಡಬೇಕಿತ್ತು. ಆದರೆ ಆ ಬಗ್ಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ ಎಂದರು.
ಜತೆಗೆ ಜಿಲ್ಲಾಧಿಕಾರಿಗಳ ಸಾಲು ಸಾಲು ವರ್ಗಾವಣೆ ದಸರಾ ಸಿದ್ದತೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ಹಿಂದಿನ ಜಿಲ್ಲಾಧಿಕಾರಿ ಸರಳ ದಸರಾಗೆ ಸಾಕಷ್ಟು ಪ್ಲಾನ್ ಮಾಡ್ಕೊಂಡಿದ್ರು. ಆದರೆ ಜಿಲ್ಲಾಧಿಕಾರಿಯನ್ನ ದಿಢೀರ್ ವರ್ಗಾವಣೆ ಮಾಡಿದ್ದಾರೆ. ಇದೀಗ ಬಂದ ನೂತನ ಜಿಲ್ಲಾಧಿಕಾರಿ ದಸರಾ ಸಿದ್ದತೆ ಮಾಡಿಕೊಳ್ಳೊದಕ್ಕೆ ಹೆಚ್ಚು ಸಮಯ ಬೇಕಾಗುತ್ತೆ ಎಂದು ತಸ್ನೀಂ ಹೇಳಿದರು.
Key words: mysore-dasara- state government -‘chocolate- grants-Mysore Mayor- Tasneem
 
            