ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋದ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:ಜೂ-2:(www.justkannada.in) ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಹೀನಾಯವಾದ ಸೋಲು ಹಿನ್ನಲೆಯಲ್ಲಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಗ್ರಾಮವಾಸ್ತವ್ಯಕ್ಕೆ ಮೊರೆಹೋಗಲು ನಿರ್ಧರಿಸಿದ್ದಾರೆ.

ಚುನಾವಣೆಯಲ್ಲಿ ಸೋಲು ಹಾಗೂ ಸಮ್ಮಿಸ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಎದ್ದಿರುವ ಅಸಮಾಧಾನ ಹಿನ್ನಲೆಯಲ್ಲಿ ಎಲ್ಲವನ್ನೂ ಮತ್ತೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯಮಾಡಿ ಜನರ ಮನ ಗೆಲ್ಲಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ತಿಂಗಳಿನಿಂದಲೇ ಗ್ರಾಮವಾಸ್ತವ್ಯಕ್ಕೆ ಸಜ್ಜಾಗಿರುವ ಸಿಎಂ ಕುಮಾರಸ್ವಾಮಿ ತಿಂಗಳಲ್ಲಿ 4 ದಿನಗಳ ಕಾಲ ಅಂದರೆ ವಾರಕ್ಕೆ ಒಂದು ದಿನದಂತೆ ಗ್ರಾಮವಾಸ್ತವ್ಯ ಮಾಡಲು ಚಿಂತನೆ ನಡೆಸಿದ್ದಾರೆ. ಗ್ರಾಮ ಪಂಚಾಯ್ತಿ, ಹೋಬಳಿ ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಜನರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ.

ಈ ಹಿಂದೆ 20-20 ಸರ್ಕಾರದ ಅವಧಿಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಎಂಬ ಹೊಸ ಪರಿಕಲ್ಪನೆಯೊಂದಿಗೆ ಗ್ರಾಮಗಳಲ್ಲಿ ವಾಸ್ತವ್ಯಮಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಅದಾದ ಬಳಿಕ ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಿಂದ ದೂರ ಸರಿದಿದ್ದರು. ಇದಕ್ಕೆ ಕುಮಾರಸ್ವಾಮಿಯವರ ಅನಾರೋಗ್ಯ ಹಾಗೂ ಅವರಿಗಾದ ಎರಡು ಸರ್ಜರಿ ಕಾರಣ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹಿಂದೆ ಹೇಳಿಕೆ ನಿಡಿದ್ದರು. ಅಲ್ಲದೇ ಕುಮಾರಸ್ವಾಮಿಯವರ ಅನಾರೋಗ್ಯದ ಕಾರಣಕ್ಕಾಗಿ ವೈದ್ಯರು ಸಹ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರುವಂತೆ ಸಲಹೆ ನೀಡಿದ್ದರು. ಆದರೀಗ ಮೈತ್ರಿ ಸರ್ಕಾರಕ್ಕೆ ಜನಮನ್ನಣೆ ಅಗತ್ಯವಿದ್ದು, ಜನರ ಮನಗೆಲ್ಲುವ ನಿಟ್ಟಿನಲ್ಲಿ ಮತ್ತೆ ಗ್ರಾಮವಾಸ್ತವ್ಯದ ಮೊರೆಹೋಗಲು ಸಿಎಂ ನಿರ್ಧರಿಸಿದ್ದಾರೆ.

ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋದ ಸಿಎಂ ಹೆಚ್ ಡಿ ಕುಮಾರಸ್ವಾಮಿ
CM H D Kumaraswamy,Gramavastavya,coalition government