ನಾನು ಈಗ ಆರೋಗ್ಯವಾಗಿದ್ದೇನೆಂದ ಶಾಸಕ ತನ್ವೀರ್ ಸೇಠ್: ರವಿ ಪೂಜಾರಿ ವಿಚಾರದಲ್ಲಿ ಹೊಸ ಬಾಂಬ್….

ಮೈಸೂರು,ಫೆ,24,2020(www.justkannada.in): ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗುತ್ತಿದ್ದು, ಧ್ವನಿ ಸರಿಯಾಗಲು ಥೆರಪಿ  ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್ ಸೇಠ್ ಚಿಕಿತ್ಸೆ ಪಡೆದು ದುಬೈನಿಂದ ಮೈಸೂರಿಗೆ ಆಗಮಿಸಿದ್ದಾರೆ. ಶಾಸಕ ತನ್ವೀರ್ ಸೇಠ್ ಮನೆ ಮುಂದೆ ಪೋಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ತನ್ವೀರ್ ಸೇಠ್ ಅವರನ್ನ ಭೇಟಿ ಮಾಡಲು ಬಂದವರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳ ಬಿಡುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಹಾಗೂ ಮನೆ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.

ತನ್ವೀರ್ ಭೇಟಿಯಾಗಲು ತಂಡೋಪತಂಡವಾಗಿ ಮುಖಂಡರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗುತ್ತಿದೆ. ಧ್ವನಿ ಸರಿಯಾಗಲು ಥೆರಪಿ  ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ. ಮೊದಲಿಗೆ ಹೊಲಿಸಿದರೆ ಇದೀಗ ಫೈನ್ ಮತ್ತು ಧ್ವನಿ ಸುಧಾರಿಸಿದೆ. ಇನ್ನು ಮುಂದೆ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.  ಮಾರ್ಚ್ 2ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲೂ ಪಾಲ್ಗೊಳ್ಳುತ್ತೇನೆ ಎಂದು ನುಡಿದರು.

ರವಿ ಪೂಜಾರಿಯಿಂದ ಬೆದರಿಕೆ‌ ಪ್ರಕರಣ ಕುರಿತು ಪ್ರತಿಕ್ರಿಯಿಸಿ  ರವಿ ಪೂಜಾರಿ ವಿಚಾರದಲ್ಲಿ ಹೊಸ ಬಾಂಬ್ ಸಿಡಿಸಿದ ಶಾಸಕ ತನ್ವೀರ್ ಸೇಠ್, ನನಗೆ ಮತ್ತು ಸಾ.ರಾ ಮಹೇಶ್ ಗೆ ಮಾತ್ರ ಬೆದರಿಕೆ ಇರಲಿಲ್ಲ. ಇನ್ನು ಸಾಕಷ್ಟು ಜನ ಶಾಸಕರುಗಳಿಗೆ ಬೆದರಿಕೆ‌ ಇತ್ತು. ನಾನು ಸಾ.ರಾ.ಮಹೇಶ್ ಮಾತ್ರ  ದೂರನ್ನು ಕೊಟ್ಟಿದ್ವಿ. ತನಿಖೆ ನಂತರ ಯಾವೆಲ್ಲ ಶಾಸಕರುಗಳಿಗೆ ಬೆದರಿಕೆ ಇತ್ತು ಎಂಬುದು ಬಯಲಾಗುತ್ತೆ. ಸದ್ಯ ಆತನನ್ನು ಬಂಧಿಸಿ‌ ಕರೆತರುತ್ತಿದ್ದಾರೆ. ಇನ್ನು ಮೇಲೆ ಎಲ್ಲ ವಿಚಾರಗಳು ಬೆಳಕಿಗೆ ಬರಲಿದೆ‌ ಎಂದು ಹೇಳಿದರು.

ತಮ್ಮ ಮೇಲೆ ಕೊಲೆ ಯತ್ನ ಪ್ರಕರಣ ನಡೆದ ಬಗ್ಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಈ ಘಟನೆ ನಡೆಯಬಾರದಿತ್ತು. ನಡೆದಿದೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು  ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದರು.

ನನ್ನ ಮೇಲೆ ಯಾರು, ಏತಕ್ಕಾಗಿ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ಅದನ್ನ ಗೊತ್ತಿಲ್ಲದೆ ನಾನು ಹೇಳಲು ಸಾಧ್ಯವಿಲ್ಲ. ಸದ್ಯ ಪ್ರಕರಣವನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಕ್ತಾಯದ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ನನಗೆ ಹೆಚ್ಚಿನ ಸೆಕ್ಯೂರಿಟಿ ಬೇಕಿಲ್ಲ, ನನ್ನ ಜೊತೆ ನನ್ನ ಕಾರ್ಯಕರ್ತರೇ ಇದ್ದಾರೆ. ಸಾವನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ. ಆದರೆ ನನಗೆ ಒಳ್ಳೆಯ ಸಾವು ಬರಲಿ ಎಂದು ದೇವರಲಿ ಪ್ರಾರ್ಥಿಸುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: mysore- MLA -Tanveer Sait -I am- healthy