ಮೈಸೂರು,ಜ,3,2020(www.justkannada.in): ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನ ಟೀಕಿಸಿದ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ವಸತಿ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ನವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಇದೆ. ಇನ್ನೆರಡು ದಿನದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಒಳ್ಳೆ ಸುದ್ದಿ ನೀಡುತ್ತಾರೆ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ಗರಿಗೆ ಕಾಮಾಲೆ ಕಣ್ಣು ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ. ಹೀಗಾಗಿ ಪ್ರಧಾನಿ ಭಾಷಣ ಟೀಕಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಅವರುಗಳಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸಿಗರು ಹಾಗೂ ಕುಮಾರ ಸ್ವಾಮಿಯವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸ. ಇದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಯಾವುದೋ ವಿಚಾರಕ್ಕೆ ಇನ್ನೇನನ್ನು ಸೇರಿಸಿ ಮಾತನಾಡಬಾರದು. ಪ್ರಧಾನ ಮಂತ್ರಿಗಳು ಮಾತನಾಡಿದ್ದರಲ್ಲಿ ತಪ್ಪೇನಿದೆ. ಎರಡು ಬಾರಿ ಪ್ರಧಾನ ಮಂತ್ರಿಗಳು ಆ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ಹೆಮ್ಮೆಯ ವಿಚಾರ.ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಚಿವ ವಿ.ಸೋಮಣ್ಣ ಟಾಂಗ್ ನೀಡಿದರು.
ಬೆಂಗಳೂರು ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಅದರನ್ನ ರದ್ದು ಪಡಿಸಿ ಬೇರೆ ಏನಾದ್ರು ಮಾಡೋಣ ಅಂತ ಯೋಚನೆ ಮಾಡಿದ್ದೀವಿ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇವೆ. ನಾನು 45 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೀನಿ ಅಂದಿನಿಂದ ಅದೊಂದೆ ರಸ್ತೆ ಇದೆ. ಇನ್ನಾದರೂ ಆ ರಸ್ತೆಯಲ್ಲಿನ ಆಚರಣೆಯನ್ನ ನಿಲ್ಲಿಸಿ ಬೇರೆ ಕಡೆ ಆಚರಿಸಲು ಚಿಂತನೆ ಮಾಡ್ತಿವಿ. ಇದಕ್ಕೆ ಎಲ್ಲರ ಸಲಹೆ ಪಡೆಯುತ್ತೇವೆ ಎಂದರು.
key words: Good news – state – next two days – PM Modi-mysore-Minister V. Somanna.






