ಮೈಸೂರು,ನವೆಂಬರ್,4,2026 (www.justkannada.in): ಅರಮನೆ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಸದ್ಯ ಸ್ಟೇಟಸ್ಕೋ ಹಂತದಲ್ಲಿದೆ. ಕೆಲವು ನ್ಯಾಯಾಲಯದ ತೀರ್ಪುಗಳು ಹೊರಬಂದರೆ ಎಲ್ಲವೂ ಸರಿಯಾಗಲಿದೆ. ಈ ಎಲ್ಲ ಗೊಂದಲಗಳಿಗೆ ನ್ಯಾಯಾಲಯದ ತೀರ್ಪೇ ಉತ್ತರವಾಗಲಿದೆ. ತೀರ್ಪಿನ ಬಳಿಕ ವಿವಾದಗಳು ಅಂತ್ಯಗೊಳ್ಳುವ ವಿಶ್ವಾಸವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಬೆಂಗಳೂರಿನ ಅರಮನೆಗೆ ಸಂಬಂಧಿಸಿದ 460 ಎಕರೆ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದರು. ಇಷ್ಟು ದೊಡ್ಡ ಪ್ರಮಾಣದ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡುವುದು ಸರಿಯೇ ಅಥವಾ ತಪ್ಪೇ ಎಂಬುದನ್ನು ಸಾರ್ವಜನಿಕರೇ ನಿರ್ಧರಿಸಬೇಕು ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ, ಮೈಸೂರು ಅರಮನೆ, ಚಿನ್ನದ ಅಂಬಾರಿ ಮತ್ತು ರಾಜಮನೆತನದ ಧಾರ್ಮಿಕ ಆಚರಣೆಗಳ ಕುರಿತಂತೆ ತಮ್ಮ ಹಕ್ಕು ಹಾಗೂ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಮೋದಾದೇವಿ ಒಡೆಯರ್, ಸರ್ಕಾರದೊಂದಿಗೆ ಸಂಘರ್ಷ ತಮ್ಮ ಉದ್ದೇಶವಲ್ಲ. ಪರಸ್ಪರ ಗೌರವದೊಂದಿಗೆ ಸಂಪ್ರದಾಯಗಳಿಗೆ ಅವಕಾಶ ನೀಡಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ಹೇಳಿದ್ದಾರೆ.







