ಹುಬ್ಬಳ್ಳಿ,ಅಕ್ಟೋಬರ್,31,2026 (www.justkannada.in): ರಾಜ್ಯದಲ್ಲಿ ಅತಿರೇಕ ಮಟ್ಟಕ್ಕೆ ಹಾಲು ಮೊಸರಿನ ದರ ಏರಿಕೆ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಜನಸಾಮಾನ್ಯರ ಹೊಟ್ಟೆ ಮೇಲೆ ನೇರ ದಾಳಿ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರದಿಂದ ಲೀಟರ್ ಮೊಸರಿಗೆ 14 ರೂ ಹೆಚ್ಚಳ ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭಾರಿ ಬೆಲೆ ಏರಿಕೆಯಾಗಿದೆ. ಕಾಂಗ್ರಸ್ ಸರ್ಕಾರ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ ಮೂಲಕ ಮೊಸರಿನ ದರ ಅತಿರೇಕದ ಮಟ್ಟಕ್ಕೆ ಏರಿಕೆ ಮಾಡಿದೆ. ಅರ್ಧ ಲೀಟರ್ ಮೊಸರು ಬೆಲೆ ಶೇ 21. 43 ರಷ್ಟು ಏರಿಕೆ ಆಗಿದೆ. ಒಂದು ಲೀಟರ್ ಮೊಸರು ಬೆಲೆ ಶೇ 25.93 ರಷ್ಟು ಏರಿಕೆಯಾಗಿದೆ. ಒಂದೇ ಬಾರಿಗೆ ಶೇ 21 ರಿಂದ 26 ರಷ್ಟು ಬೆಲೆ ಏರಿಕೆಯಾಗಿದೆ ಇದು ಕೆಳ ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆ ಮೇಲೆ ನೇರ ದಾಳಿಯಾಗಿದೆ ಎಂದು ಗುಡುಗಿದರು.
ಮೊಸರು ಐಷರಾಮಿ ವಸ್ತುವಲ್ಲ ಅದು ದಿನನಿತ್ಯದ ಆಹಾರ. ತನ್ನ ರಾಜಕೀಯ ತಪ್ಪುಗಳಿಗೆ ಬಡವರಿಂದ ದಂಡವಸೂಲಿ ಮಾಡುತ್ತಿದೆ. ಬೆಲೆ ಏರಿಕೆಯು ಜನ ವಿರೋಧಿ, ದುಬಾರಿ ಸರ್ಕಾರದ ನೀತಿಗೆ ಹಿಡಿದ ಕೈಗನ್ನಡಿ ಎಂದು ಸರಕಾರದ ವಿರುದ್ದ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.







