ಮೈಸೂರು/ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2022ರ ಮೌಲ್ಯೀಕರಣ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಆ ಕಾಯ್ದೆಯಡಿ ನೇಮಕಗೊಂಡ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಾನೂನುಬದ್ಧ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು JUSTKANNADA ಗೆ ನೀಡಿರುವ ಸಂಕ್ಷಿಪ್ತ ಕಾನೂನು ಅಭಿಪ್ರಾಯದಲ್ಲಿ, 2026ರ ಅಕ್ಟೋಬರ್ 29ರಂದು Srinivasa T. v. State of Karnataka ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ.

ತೀರ್ಪಿನ 17ನೇ ಪ್ಯಾರಾದಲ್ಲಿ 2022ರ ಮೌಲ್ಯೀಕರಣ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲಾಗಿದೆ. 18ನೇ ಪ್ಯಾರಾದಲ್ಲಿ ಕಳಂಕರಹಿತ ಅಭ್ಯರ್ಥಿಗಳ ನೇಮಕಾತಿಯನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳಬೇಕೆಂಬ ಮನವಿಯನ್ನು ತಿರಸ್ಕರಿಸಲಾಗಿದೆ. 19ನೇ ಪ್ಯಾರಾದಲ್ಲಿ ಕಳಂಕಿತ ನೇಮಕಾತಿ ಪ್ರಕ್ರಿಯೆಯ ಆಧಾರದ ಮೇಲೆ ಮಾಡಲಾದ ನೇಮಕಾತಿಗಳೂ ಅಂತ್ಯಗೊಳ್ಳಲಿವೆ ಎಂದು ಸ್ಪಷ್ಟಪಡಿಸಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಸುಪ್ರೀಂಕೋರ್ಟ್ ತೀರ್ಪು ಪಾಲನೆ ಕಡ್ಡಾಯ*
ಸಂವಿಧಾನದ 141 ಮತ್ತು 144ನೇ ವಿಧಿಗಳ ಪ್ರಕಾರ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸುವುದು ರಾಜ್ಯ ಸರ್ಕಾರದ ಕಡ್ಡಾಯ ಕರ್ತವ್ಯವಾಗಿದೆ. ಮುಖ್ಯಮಂತ್ರಿಗಳು ಸಂವಿಧಾನದ 154 ಮತ್ತು 163ನೇ ವಿಧಿಗಳ ಅಡಿಯಲ್ಲಿ ಚಲಾಯಿಸುವ ಕಾರ್ಯಾಂಗದ ಅಧಿಕಾರವೂ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ.
ಮುಖ್ಯಮಂತ್ರಿಗಳು ಯಾವುದೇ ಭರವಸೆ ನೀಡಿದರೂ ಅಥವಾ ಸರ್ಕಾರದ ಆದೇಶ ಹೊರಡಿಸಿದರೂ ಸುಪ್ರೀಂಕೋರ್ಟ್ ತೀರ್ಪನ್ನು ಬದಲಿಸಲು, ಅಮಾನತುಗೊಳಿಸಲು ಅಥವಾ ನಿಷ್ಪ್ರಯೋಜಕಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ಅಸಂವಿಧಾನಿಕ ಎಂದು ಘೋಷಿಸಲಾದ ಕಾಯ್ದೆಯ ಆಧಾರದ ಮೇಲೆ ನೇಮಕಾತಿಗಳನ್ನು ಮುಂದುವರಿಸಲೂ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

*ಮತ್ತೆ ಅದೇ ಕಾಯ್ದೆ ಜಾರಿಗೆ ಅವಕಾಶವಿಲ್ಲ*
ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅದೇ ಮೌಲ್ಯೀಕರಣ ಕಾಯ್ದೆಯನ್ನು ಮರುಜಾರಿಗೆ ತರಲು ಸಾಧ್ಯವಿಲ್ಲ. ಹೊಸ ಕಾನೂನು ರೂಪಿಸುವುದಾದರೆ ಹಿಂದಿನ ಕಾಯ್ದೆಯಲ್ಲಿದ್ದ ಸಾಂವಿಧಾನಿಕ ಲೋಪಗಳನ್ನು ಸರಿಪಡಿಸಬೇಕಾಗುತ್ತದೆ. ಅಂತಹ ಕಾನೂನೂ ನ್ಯಾಯಾಂಗ ಪರಿಶೀಲನೆಗೆ ಒಳಪಡಲಿದೆ ಎಂದು ತಿಳಿಸಿದ್ದಾರೆ.
*ರಿವ್ಯೂ ಅರ್ಜಿ ಸಲ್ಲಿಸಿದರೂ ತೀರ್ಪಿಗೆ ತಡೆಯಾಗುವುದಿಲ್ಲ*
ತೀರ್ಪಿನಿಂದ ಸರ್ಕಾರಕ್ಕೆ ಅಸಮಾಧಾನವಿದ್ದರೆ ಸುಪ್ರೀಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿ ಸಲ್ಲಿಸಿದ ಮಾತ್ರಕ್ಕೆ ತೀರ್ಪಿನ ಅನುಷ್ಠಾನಕ್ಕೆ ತಡೆಯಾಗುವುದಿಲ್ಲ. ಸುಪ್ರೀಂಕೋರ್ಟ್ ಪ್ರತ್ಯೇಕವಾಗಿ ತಡೆಯಾಜ್ಞೆ ನೀಡಿದರೆ ಮಾತ್ರ ತೀರ್ಪಿನ ಜಾರಿಗೆ ತಡೆ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ.
*ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ*
ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದಿದ್ದರೆ ಸಂವಿಧಾನದ 129ನೇ ವಿಧಿ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 2(b) ಮತ್ತು 12ರ ಅಡಿಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
*ಮುಖ್ಯಮಂತ್ರಿಗಳ ಭರವಸೆಯಿಂದ ಕಾನೂನು ರಕ್ಷಣೆ ಇಲ್ಲ*
ಒಟ್ಟಾರೆ, 2022ರ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಅದರ ಆಧಾರದ ಮೇಲೆ ನೇಮಕಗೊಂಡಿರುವ ಅಧಿಕಾರಿಗಳ ನೇಮಕಾತಿಯನ್ನು ಮುಂದುವರಿಸಲು ಮುಖ್ಯಮಂತ್ರಿಗಳಿಗೆ ಕಾನೂನುಬದ್ಧ ಅಧಿಕಾರವಿಲ್ಲ. ಪ್ರಭಾವಿತ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಅಥವಾ ಅವರಿಗೆ ಭರವಸೆ ನೀಡುವುದರಿಂದ ಯಾವುದೇ ಕಾನೂನು ರಕ್ಷಣೆ ದೊರೆಯುವುದಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್ ತಮ್ಮ ಅಭಿಪ್ರಾಯದಲ್ಲಿ ಸ್ಪಷ್ಟಪಡಿಸಿದ್ದಾರೆ.

KEY WORDS:
2011 KAS Recruitment Case, Supreme Court Verdict Karnataka, Karnataka Validation Act 2022, Gazetted Probationers Recruitment, Srinivasa T vs State of Karnataka, S.H. Hosagoudar Legal Opinion, Karnataka Government Recruitment, KAS Recruitment Controversy.







