ಮೈಸೂರು, ಅಕ್ಟೋಬರ್,28,2026 (www.justkannada.in): ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಪರವಾಗಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಪ್ರತಿಭಟನೆಗಳನ್ನು ಕೈಬಿಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಅರಮನೆ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಿದ್ದ ಕೆಲವು ಸಂಘಟಕರಿಗೆ ಪ್ರತಿಭಟನೆ ಕೈಬಿಡುವಂತೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಮನೆತನದ ಬಗ್ಗೆ ವಿವಿಧ ವಲಯಗಳ ಜನರು ವ್ಯಕ್ತಪಡಿಸುತ್ತಿರುವ ಕಾಳಜಿ, ಬೆಂಬಲ ಹಾಗೂ ಭಾವನೆಗಳನ್ನು ಪ್ರಮೋದಾದೇವಿ ಒಡೆಯರ್ ಗೌರವಿಸಿದ್ದಾರೆ. ರಾಜಮನೆತನಕ್ಕೆ ಬೆಂಬಲ ಸೂಚಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಸದ್ಯದ ಪರಿಸ್ಥಿತಿ ತಿಳಿಯಾಗಲು ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ರಾಜಕೀಯಗೊಳಿಸುವುದು ಬೇಡ
ಈ ವಿಚಾರವನ್ನು ತುರ್ತಾಗಿ ಮುಂದಕ್ಕೆ ಕೊಂಡೊಯ್ಯುವುದು ಅಥವಾ ರಾಜಕೀಯಗೊಳಿಸುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಬಹುದು. ಬದಲಾಗಿ, ಶಾಂತಚಿತ್ತದಿಂದ ಹಾಗೂ ವಿವೇಚನೆಯಿಂದ ಪ್ರತಿಕ್ರಿಯಿಸುವ ಅಗತ್ಯವಿದೆ. ಯಾವುದೇ ತಪ್ಪು ತಿಳಿವಳಿಕೆಗಳಿದ್ದರೂ ಮಾತುಕತೆ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು ಎಂಬ ವಿಶ್ವಾಸವನ್ನ ಪ್ರಮೋದಾದೇವಿ ಒಡೆಯರ್ ಅವರು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಡುವಂತೆ ಅವರು ಮನವಿ ಮಾಡಿದ್ದಾರೆ.






