ಬೆಂಗಳೂರು,ಅಕ್ಟೋಬರ್,28,2026 (www.justkannada.in): ಭಾನುವಾರವಾಗಿರುವ ನವೆಂಬರ್ 1 ರಂದೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಹಾಗೂ ಗೌರವ ಪೂರ್ವಕವಾಗಿ ರಾಜ್ಯೋತ್ಸವ ಆಚರಿಸುವಂತೆ ಸೂಚನೆ ನೀಡಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಶ್ ಕಿಶೋರ್ ಸುರಳ್ಕರ್ ಅವರು ಸುತ್ತೋಲೆ ಹೊರಡಿಸಿದ್ದು, 2026-27ನೇ ಸಾಲಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನ 1/11/2026ರ ಭಾನುವಾರದಂದು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಹಾಗೂ ಗೌರವಪೂರ್ವಕವಾಗಿ ಆಚರಿಸಲು ಅಗತ್ಯ ಕ್ರಮಗಳನವನ ವಹಿಸುವಂತೆ ಇಲಾಖೆಯ ಸಂಬಂಧಿಸಿದ ಎಲ್ಲಾ ಅಧೀಕಾರಿಗಳಿಗೆ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಭಾನುವಾರದ ರಜಾ ದಿನದಂದು ಬಂದಿದೆ. ಹೀಗಾಗಿ ಶಾಲೆಯವರು ಬೇರೆ ದಿನ ರಾಜ್ಯೋತ್ಸವ ಆಚರಣೆ ಮಾಡುವ ಸಾಧ್ಯತೆಗಳಿದ್ದವು. ಇದು ನಮ್ಮ ಗಮನಕ್ಕೆ ಬರುತ್ತಿದ್ದಂತೆಯೆ ರಾಜ್ಯೋತ್ಸವದ ದಿನವಾದ ನವೆಂಬರ್ 1 ರಂದೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಹಾಗೂ ಗೌರವ ಪೂರ್ವಕವಾಗಿ ರಾಜ್ಯೋತ್ಸವ ಆಚರಿಸುವಂತೆ ಸೂಚನೆ ನೀಡಿದ್ದೇವೆ. ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಯಾವುದೇ ಕಾರಣಕ್ಕೂ ರಜಾ ದಿನವೆಂಬ ಕಾರಣಕ್ಕೆ ನಮ್ಮ ಈ ನಾಡಹಬ್ಬದ ಆಚರಣೆಯನ್ನು ಮುಂದೂಡುವಂತಿಲ್ಲ ಎಂದು ಸೂಚಿಸಲಾಗಿದೆ. ಇಲಾಖೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದ್ದೇವೆ.
ಕರ್ನಾಟಕ ರಾಜ್ಯೋತ್ಸವ ಆಚರಣೆಯ ವಿಷಯದಲ್ಲಿ ಯಾರೂ ನಿರ್ಲಕ್ಷ್ಯವಹಿಸುವಂತೆಯೇ ಇಲ್ಲ. ಇದು ನಮ್ಮ ಹಬ್ಬ, ನಮ್ಮ ಕನ್ನಡದ ಹಬ್ಬ. ನಮ್ಮ ಹೆಮ್ಮೆಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ದಿನ. ಇದನ್ನು ಯಾರೂ ಮರೆಯದಿರೋಣ ಎಂದು ತಿಳಿಸಿದ್ದಾರೆ.






