ಬೆಳಗಾವಿ/ಬೆಂಗಳೂರು, ಅ.27: “ಮಧ್ಯರಾತ್ರಿವರೆಗೂ ನಡೆಸಿದ ನಿರಂತರ ಪ್ರಯತ್ನದಿಂದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಂಧಾನ ಯಶಸ್ವಿಯಾಗಿದೆ. ರಾಜ್ಯದ ಜನರನ್ನು ಬದುಕಿಸುವ ನಮ್ಮ ಬದ್ಧತೆ ಅಚಲವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪುನರುಚ್ಚರಿಸಿದರು.
ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಬೆಂಗಳೂರಿನಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಶಿಯೇಶನ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ರೈತರು ದೇಶಕ್ಕೆ ದೊಡ್ಡ ಆಸ್ತಿ:
“ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸತತವಾಗಿ ಎರಡು ದಿನಗಳ ಕಾಲ ಹಗಲು ರಾತ್ರಿ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ರೈತರು ಈ ದೇಶಕ್ಕೆ ದೊಡ್ಡ ಆಸ್ತಿಯಾಗಿದ್ದು, ಅವರನ್ನು ಬದುಕಿಸುವುದು ಮತ್ತು ಅವರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಸ್ಪಷ್ಟಪಡಿಸಿದರು.
“ಸಭೆಗೆ ಎಲ್ಲಾ ಶಾಸಕರು ಹಾಗೂ ಕಾರ್ಖಾನೆಯವರನ್ನು ಆಹ್ವಾನಿಸಲಾಗಿತ್ತು. 80ಕ್ಕೂ ಹೆಚ್ಚು ಕಾರ್ಖಾನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸಭೆಯಲ್ಲಿ ಅವರ ಪರಿಸ್ಥಿತಿಯನ್ನು ಚರ್ಚಿಸಲಾಗಿದೆ” ಎಂದರು.
ಕಬ್ಬು ಅರೆಯುವುದು ಶುರುವಾಗದಿದ್ದರೆ ರೈತರಿಗೆ ಕಬ್ಬು ಒಣಗುವ ಆತಂಕವಿದೆ:
“ರೈತರು ತಮ್ಮ ಬೇಡಿಕೆ ಕೇಳುವುದರಲ್ಲಿ ತಪ್ಪಿಲ್ಲ. ಏಕೆಂದರೆ ಎಲ್ಲಾ ಬೆಲೆಗಳೂ ಏರಿಕೆಯಾಗಿವೆ. ಹತ್ತು ವರ್ಷಗಳಿಂದ ಸಕ್ಕರೆ ಬೆಲೆ (ಎಂಎಸ್ ಪಿ) ಮಾತ್ರ ಹೆಚ್ಚಾಗಿಲ್ಲ. ಅದು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ವರ್ಷ ಕಬ್ಬಿನ ಬೆಳೆ ಕೂಡ ಕಡಿಮೆಯಾಗಿದ್ದು, ಕಬ್ಬು ಅರೆಯುವುದೂ ಪ್ರಾರಂಭವಾಗಿಲ್ಲ. ಅದು ಶುರುವಾಗದಿದ್ದರೆ ರೈತರಿಗೆ ಕಬ್ಬು ಒಣಗಿ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವಿದೆ. ಈ ಮಧ್ಯೆ ವಿವಿಧ ಕಡೆಗಳಲ್ಲಿ ರೈತರ ಹೋರಾಟಗಳು ಕೂಡ ಮುಂದುವರಿದಿವೆ” ಎಂದರು.
ಕಾರ್ಖಾನೆ ಮತ್ತು ರೈತರು ಪರಸ್ಪರ ಕೊಂಡಿಯಂತೆ:
“ಕಾರ್ಖಾನೆಗಳಿದ್ದರೆ ರೈತರಿಗೆ ಅನುಕೂಲ. ರೈತರಿದ್ದರೆ ಕಾರ್ಖಾನೆಗಳಿಗೆ ಅನುಕೂಲ. ಇವೆರಡೂ ಪರಸ್ಪರ ಕೊಂಡಿ ಇದ್ದಂತೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ತಮಗೆ ಸಾಲ ನೀಡುವುದಿಲ್ಲ, ಸಹಕಾರಿ ಬ್ಯಾಂಕ್‌ಗಳ ಮೂಲಕವೇ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದು, ಹಳೇ ಸಾಲಕ್ಕೆ ಹೊಸ ಸಾಲವನ್ನು ಪಡೆದು ಸಾಲ ತೀರಿಸುತ್ತಿದ್ದೇವೆ ಎಂದು ಫ್ಯಾಕ್ಟರಿ ಮಾಲೀಕರು ತಿಳಿಸಿದ್ದಾರೆ. ಬೇಕಿದ್ದರೆ ನಾಲ್ಕೈದು ಫ್ಯಾಕ್ಟರಿಗಳನ್ನು ಸರ್ಕಾರಕ್ಕೆ ವಹಿಸಿಕೊಡುತ್ತೇವೆ, ನೀವೇ ನಡೆಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಯಶವಂತಗೌಡ ಪಾಟೀಲರು ಕೂಡ ನಾನು ಅಧ್ಯಕ್ಷನಾಗಿದ್ದು ನನಗೂ ನಿಭಾಯಿಸಲು ಆಗುತ್ತಿಲ್ಲ, ಕಾರ್ಖಾನೆಯನ್ನು ಯಾರಿಗಾದರೂ ವಹಿಸಿ ಎನ್ನುತ್ತಿದ್ದಾರೆ. ಹಿಂದೆ ಇದೇ ಪರಿಸ್ಥಿತಿ ಮಂಡ್ಯ ಜಿಲ್ಲೆಯಲ್ಲೂ ಬಂದಾಗ ರೈತ ಸಂಘದವರಿಗೆ ಕಾರ್ಖಾನೆ ಬಿಟ್ಟುಕೊಟ್ಟು ಸರ್ಕಾರದಿಂದ ಸಹಾಯ ಮಾಡಲಾಗಿತ್ತು. ಈಗಲೂ ಮಂಡ್ಯ ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ಸಹಾಯ ಮಾಡಲಾಗಿದ್ದರೂ ನಿರೀಕ್ಷಿತ ಮಟ್ಟಕ್ಕೆ ತರಲು ಸಾಧ್ಯವಾಗಿಲ್ಲ. ಕಾರ್ಖಾನೆ ಮಾಲೀಕರು ಇಂತಹ ಹಲವು ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ” ಎಂದರು.

10 ವರ್ಷಗಳಿಂದ ಸಕ್ಕರೆ ಹಾಗೂ ಕಬ್ಬಿನ ಬೆಲೆಯನ್ನು ನಿಗದಿ ಮಾಡದಿರುವುದು ಸಮಸ್ಯೆಗೆ ಕಾರಣ:
“ರೈತರಿಗೆ ನಾನು ಮಾತು ನೀಡಿದಂತೆ ಮಧ್ಯರಾತ್ರಿಯವರೆಗೆ ನಡೆದ ಸುದೀರ್ಘ ಸಭೆಯಲ್ಲಿ ಒಂದು ಒಪ್ಪಂದಕ್ಕೆ ಬರಲಾಗಿದೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆ ಹಾಗೂ ಕಬ್ಬಿನ ಬೆಲೆಯನ್ನು ನಿರ್ದಿಷ್ಟಪಡಿಸದೆ ಇರುವುದರಿಂದಲೇ ಈ ಸಮಸ್ಯೆ ಉದ್ಭವಿಸಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ರೈತರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಬೆಲೆಯನ್ನು ನಿಗದಿ ಮಾಡಿಕೊಡಲು ಒಂದು ಸಮಿತಿಯನ್ನು ರಚಿಸಿ ರೈತರಿಗೆ ಆಶ್ವಾಸನೆ ನೀಡಿದ್ದಾರೆ. ನಮ್ಮ ಹಾಗೂ ಜೋಶಿಯವರ ಮೇಲಿನ ವಿಶ್ವಾಸದಿಂದ ರೈತರು ಕೇಂದ್ರ ಸಚಿವರ ಮನೆಯ ಮುತ್ತಿಗೆ ಹಾಕುವುದನ್ನು ಕೈಬಿಟ್ಟರು” ಎಂದರು.
ಸಕ್ಕರೆ ಬೆಲೆ ನಿಗದಿ: ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ:
“ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಲೆ ನಿಗದಿ ಮಾಡಿದ ನಂತರ ಅದಕ್ಕೆ ಅನುಗುಣವಾಗಿ ಕಾರ್ಖಾನೆ ಎಷ್ಟು ದರ ನೀಡಬೇಕು ಎಂಬುದನ್ನು ನಿರ್ಧಾರಿಸಲಾಗಿದೆ. ರೈತರು ಹಾಗೂ ರೈತರ ಸಂಘದ ಅಧ್ಯಕ್ಷರಾದ ಪೂಜಾರಿ ಅವರು ಒಪ್ಪಿಕೊಂಡಿದ್ದಾರೆ. ಬೆಲೆ ಏನು ಎಂಬುವುದನ್ನು ನಾನು ಬಹಿರಂಗ ಪಡಿಸುವುದಿಲ್ಲ. ದಕ್ಷಿಣ ಕನ್ನಡ, ಬಾಗಲಕೋಟೆ, ಬಿಜಾಪುರ, ಹಾವೇರಿ, ಮಂಡ್ಯ ಭಾಗದ ರೈತರೂ ಇದ್ದರು. ಅವರೆಲ್ಲರ ಜೊತೆ ಮಾತನಾಡಲಾಗಿದೆ. ಗ್ರಾಹಕರಿಗೆ ಒಂದು ಬೆಲೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಪ್ರತ್ಯೇಕ ಬೆಲೆ ನಿಗದಿಪಡಿಸುವ ಕುರಿತು ರೈತರು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ” ಎಂದರು.
ರೈತರು ನಮ್ಮ ಸರ್ಕಾರದ ಆದ್ಯತೆ:
“ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿವೆ. ನಮ್ಮಲ್ಲಿ ಉಚಿತವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ. 30 ಸಾವಿರ ಕೋಟಿ ರೂಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ. ಇದು ರಾಜ್ಯಕ್ಕೆ ದೊಡ್ಡ ಹೊರೆಯಾಗಿದೆ. ಆದರೆ ರಾಜ್ಯದ ರೈತರನ್ನು ಬದುಕಿಸುವ ನಮ್ಮ ಬದ್ಧತೆ ಅಚಲ. ರೈತರು ನಮ್ಮ ಅನ್ನದಾತರು ಎಂದು ರೈತರಿಗೆ ಸದಾ ಆದ್ಯತೆಯನ್ನು ಸರ್ಕಾರ ನೀಡುತ್ತಾ ಬಂದಿದೆ” ಎಂದರು.

ಸಹಮತದ ಮೂಲಕ ಸಮಸ್ಯೆಗೆ ಅಂತ್ಯ ಹಾಡಲು ಒಪ್ಪಿಗೆ:
“ಬಯಲುಸೀಮೆ ರೈತರು, ದ್ರಾಕ್ಷಿ ಬೆಳೆಗಾರರು, ಅಡಿಕೆ, ತೆಂಗು ಮತ್ತು ಹೂವು ಬೆಳೆಗಾರರ ಬೇಡಿಕೆಗಳೂ ಇವೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನೂ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗಿದೆ. ರೈತರಿಗೆ ಅರ್ಥವಾಗುತ್ತದೆಯಾದರೂ ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಸಹಮತದ ಮೂಲಕ ಇದಕ್ಕೆ ಅಂತ್ಯ ಹಾಡುವುದಾಗಿ ಇಬ್ಬರೂ ಒಪ್ಪಿದ್ದಾರೆ. ಬೆಲೆ ನಿಗದಿ ಕುರಿತಂತೆ ಟ್ರೈಪಾರ್ಟಿ ಒಪ್ಪಂದಕ್ಕೆ ಸಿದ್ಧತೆಗಳು ಆಗುತ್ತಿದೆ. ಇಲ್ಲಿನ ತೀರ್ಮಾನದ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದು, ಬಂದ್ ಗೆ ಕೊಟ್ಟಿದ್ದ ಕರೆಯನ್ನು ಹಿಂಪಡೆದಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ”ಎಂದರು.
ಇನ್ನೊಂದು ವಾರ ತಡವಾದರೂ ಎಲ್ಲಾ ರೈತರಿಗೂ ದೊಡ್ಡ ನಷ್ಟ:
“ಕಬ್ಬು ಬೆಳೆಗಾರರ ಸಮಸ್ಯೆ ಸುಖಾಂತ್ಯ ಕಂಡಿದೆ. ಇನ್ನೊಂದು ವಾರ ತಡವಾದರೂ ಎಲ್ಲಾ ರೈತರಿಗೂ ದೊಡ್ಡ ನಷ್ಟವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಾರ್ಖಾನೆ ಮಾಲೀಕರಿಗೆ ಕೂಡ ಹಗಲೂ ರಾತ್ರಿ ಎನ್ನದೇ ಮೀಟರ್ ಬಡ್ಡಿ ಬೀಳುತ್ತದೆ. ಅವರಿಗೂ ಇದು ದುಬಾರಿಯಾಗುತ್ತದೆ” ಎಂದರು.
ಕೇಂದ್ರ ಸಚಿವರು ರೈತರನ್ನು ಬದುಕಿಸುತ್ತಾರೆ ಎಂಬ ವಿಶ್ವಾಸವಿದೆ:
“ರಾಜ್ಯ ಸರ್ಕಾರಕ್ಕೆ ರೈತರು ಹಾಗೂ ಕಾರ್ಖಾನೆಗಳು ಎರಡೂ ಮುಖ್ಯ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೇಲೆ ನಮಗೆ ವಿಶ್ವಾಸವಿದೆ. ಅವರ ಕಾಲದಲ್ಲಿ ಇದಕ್ಕೆ ಉತ್ತಮ ತೀರ್ಮಾನ ನೀಡಿ ರೈತರನ್ನು ಬದುಕಿಸುತ್ತಾರೆ ಎಂಬ ನಂಬಿಕೆ ಇದೆ. ರೈತರು ಸಹ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದ್ದಾರೆ. ಅವರು ನಿಗದಿ ಮಾಡುವ ಬೆಲೆಗೆ ಒಪ್ಪಿಕೊಳ್ಳುವುದಾಗಿ ರೈತರೂ ಕೂಡ ಭರವಸೆ ನೀಡಿದ್ದಾರೆ” ಎಂದರು.
“ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಹಾಗೂ ಚನ್ನರಾಜ ಅವರು ಕುಳಿತು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಕೂಡ ಕಾರ್ಖಾನೆ ನಡೆಸಿ ಅನುಭವ ಪಡೆದಿರುವುದರಿಂದ ಇದಕ್ಕೆ ಅಂತ್ಯ ಹಾಡಲಾಗಿದೆ. ನಾನು ಶಾಸಕರಿಗೆ, ರೈತ ಪ್ರತಿನಿಧಿಗಳಿಗೆ, ಸಂಸದರು, ಸಚಿವರು, ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಅಭಿನಂದಿಸುತ್ತೇನೆ”ಎಂದರು.

ಸರ್ಕಾರ ರೈತರಿಗೆ ಬೆಂಬಲವಾಗಿ ನಿಂತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದೆ:
ಒಂದು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಸರ್ಕಾರಕ್ಕೆ ಹೊರೆಯಾಗದಂತೆ ಪರಿಹರಿಸಲು ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ, “ಸರ್ಕಾರದ್ದು ಇದರಲ್ಲಿ ಏನಿಲ್ಲ. ಸಿದ್ದರಾಮಯ್ಯನವರು ಹಿಂದೆ 300 ರೂ ಗಳನ್ನೂ ನೀಡಿದ್ದರು. ಕಾರ್ಖಾನೆಯವರು 250 ರೂ. ಕೊಡಲು ಒಪ್ಪಿದ್ದರು. ಅದರಲ್ಲೂ ಕೆಲವರು ಕೊಟ್ಟಿದ್ದು, ಇನ್ನೂ ಕೆಲವರು ಕೊಟ್ಟಿಲ್ಲ. ಸರ್ಕಾರ ಈಗಾಗಲೇ ಜನ ಕಲ್ಯಾಣ ಯೋಜನೆಗಳಿಗೆ ವಾರ್ಷಿಕ 1 ಲಕ್ಷ ಕೋಟಿ ನೀಡುತ್ತಿದೆ. ಉಚಿತ ವಿದ್ಯುತ್ ಗೆ ವಾರ್ಷಿಕ 30 ಸಾವಿರ ಕೋಟಿ ಸೇರಿದಂತೆ 5 ಗ್ಯಾರಂಟಿ, ಇನ್ನಿತರೆ ಯೋಜನೆಗಳಡಿ ಅನುದಾನ ಒದಗಿಸುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಇಂಥ ಯೋಜನೆಗಳು ಎಲ್ಲಿವೆ? ಬರಗಾಲದಿಂದಾಗಿ ಈ ವರ್ಷ 37% ವಿದ್ಯುತ್ ಅನ್ನು ಹೆಚ್ಚುವರಿಯಾಗಿ ಬಳಕೆ ಮಾಡಲಾಗಿದೆ. ಅದಕ್ಕೆ ಹಣ ಒದಗಿಸಲು ಆಗುತ್ತಿಲ್ಲ. ಸರ್ಕಾರದಿಂದ ನಾವು ನೆರವು ಒದಗಿಸುವುದು ಕಷ್ಟವಾಗುತ್ತದೆ. ಆದರೆ ಸರ್ಕಾರ ರೈತರಿಗೆ ಬೆಂಬಲವಾಗಿ ನಿಂತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದೆ” ಎಂದರು.
ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು:
“ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವರನ್ನೂ ಭೇಟಿ ಮಾಡಲಾಗುವುದು. ಅವರಿಗೂ ಈ ಬಗ್ಗೆ ಅರಿವಿದೆ. ಬೇಡಿಕೆಗಳನ್ನಿಡುವು ತಪ್ಪಲ್ಲ. ಆದರೆ ಮುತ್ತಿಗೆ ಹಾಕುವುದು ಸರಿಯಲ್ಲ. ನಮ್ಮ ರಾಜ್ಯದವರೆಂದು ಸಲುಗೆಯಿಂದ ವರ್ತಿಸಬಾರದು” ಎಂದರು.

key words:
D.K. Shivakumar, Karnataka sugarcane farmers, Sugarcane price crisis, Sugar factory owners, Sugarcane farmers protest, Centre sugarcane pricing policy, Karnataka sugar industry, Sugarcane farmers dispute resolved







