ಚೆನ್ನೈ, ಅಕ್ಟೋಬರ್,12,2026 (www.justkannada.in): ಮುಖ್ಯ ನ್ಯಾಯಮೂರ್ತಿಗಳು ದೇಶದ ಜನರ ಧ್ವನಿಯನ್ನು ಆಲಿಸಬೇಕು. ಚುನಾವಣಾ ಆಯೋಗ ಭೇಟಿಯಾಗಿ ಸ್ಪಂದಿಸದೇ ಇದ್ದಾಗ, ಪ್ರಧಾನಮಂತ್ರಿಗಳು ಕರೆದು ಸಮಸ್ಯೆ ಏನು ಎಂದು ಕೇಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡದೇ ಬೇರೆ ದಾರಿ ಇಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಚೆನ್ನೈನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಇಂಡಿಯಾ ಮೈತ್ರಿಕೂಟ ಭೇಟಿಗೆ ಮುಖ್ಯನ್ಯಾಯಮೂರ್ತಿಗಳು ಅವಕಾಶ ನಿರಾಕರಿಸಿರುವುದರ ಬಗ್ಗೆ ಕೇಳಿದಾಗ, “ಸಾರ್ವಜನಿಕ ಜೀವನದಲ್ಲಿ ನಾವು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ದೇಶದ ಪ್ರಜಾಪ್ರಭುತ್ವ ಹಾಗೂ ದೇಶದ ಎಲ್ಲಾ ನಾಗರಿಕರ ಮತದಾನದ ಹಕ್ಕು ರಕ್ಷಣೆಗೆ ಪ್ರಯತ್ನಿಸುತ್ತೇವೆ” ಎಂದರು.
“ಮತದಾನದ ಹಕ್ಕು ನಮ್ಮ ಬದುಕಿನ ಹಕ್ಕಾಗಿದೆ. ಅದೇ ನಮ್ಮ ಬದುಕು. ವಿರೋಧ ಪಕ್ಷದ ನಾಯಕರು ದೇಶದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು” ಎಂದು ತಿಳಿಸಿದರು.






