ಮೈಸೂರು,ಅಕ್ಟೋಬರ್,9,2026 (www.justkannada.in): ಮೈಸೂರು ದಸರಾ ಮಹೋತ್ಸವ – 2026 ರ ಅಂಗವಾಗಿ ಅ.11 ರಿಂದ 14ರವೆಗೆ ದಸರಾ ಕ್ರೀಡಾಕೂಟ ಸಿಎಂ ಕಪ್ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ಅವರು ಮಾಹಿತಿ ನೀಡಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 11 ರಂದು ಸಂಜೆ 4.30 ಗಂಟೆಗೆ ದಸರಾ ಕ್ರೀಡಾಕೂಟವನ್ನು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ವಿಶೇಷ ಆಹ್ವಾನಿತರು: ಏಷ್ಯನ್ ಗೇಮ್ಸ್ ಪದಕ ವಿಜೇತ ಗಾಲ್ಫ್ ಕ್ರೀಡಾಪಟು ಕು. ಪ್ರಣವಿ ಎಸ್. ಅರಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಪಟು ಕು. ಶಿಲ್ಪಾ ಕೆ.ಎಸ್ ಇವರು ವಿಶೇಷ ಆಹ್ವಾನಿತರಾಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ವಿವಿಧ ಬಗೆಯ 28 ಕ್ರೀಡೆಗಳು ನಡೆಯಲಿದ್ದು, 4,515 ಕ್ರೀಡಾಪಟುಗಳು ಹಾಗೂ 700 ತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಖಾಸಗಿ ಹೋಟೆಲ್ಗಳಲ್ಲಿ ಟ್ರಿಪಲ್ ಶೇರಿಂಗ್ ಆಧಾರದಲ್ಲಿ ಹಾಗೂ ತಾಂತ್ರಿಕ ವರ್ಗದವರಿಗೆ ಡಬಲ್ ಶೇರಿಂಗ್ ಆಧಾರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಂಜರಾಜ ಬಹದ್ದೂರ್ ಛತ್ರದಲ್ಲಿ ಕ್ರೀಡಾಪಟುಗಳಿಗೆ ಊಟೋಪಹಾರ ವ್ಯವಸ್ಥೆ ಮಾಡಲಾಗಿದ್ದು, ಊಟೋಪಹಾರದ ಸ್ಥಳ, ವಸತಿ ಸ್ಥಳ ಹಾಗೂ ಕ್ರೀಡಾಕೂಟ ನಡೆಯುವ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕ್ರೀಡಾಪಟುಗಳಿಗೆ ವಿಮೆ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ವೈದ್ಯಕೀಯ ಮತ್ತು ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದು. ಅಲ್ಲದೇ, 30ಕ್ಕೂ ಹೆಚ್ಚು ಫಿಸಿಯೋಥೆರಪಿಸ್ಟ್ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಕ್ರೀಡಾಕೂಟದ ಸುವ್ಯವಸ್ಥಿತ ಆಯೋಜನೆಗಾಗಿ ಉಚಿತ ಸಹಾಯವಾಣಿ 9986577211 ಮತ್ತು 9986577411 ಒಳಗೊಂಡ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾ ಉಪ ಸಮಿತಿ ಕಾರ್ಯಧ್ಯಕ್ಷರು ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಾನ್ಸನ್, ಉಪ ನಿರ್ದೇಶಕರಾದ ತಿಪ್ಪೇಸ್ವಾಮಿ, ನಾಗರತ್ನ, ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್, ರೋಸನ್ ಶೇಟ್ಟಿ ಸೇರಿದಂತೆ ಇತರರು ಇದ್ದರು.






