ಮೈಸೂರು, ಸೆಪ್ಟಂಬರ್,25, 2026 (www.justkannada.in) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಗಜಪಡೆಗೆ ಮೂರನೇ ಹಂತದ ತಾಲೀಮು ಶುರುವಾಗಿದ್ದು ಆದರೆ ಇಂದು ಮೊದಲ ದಿನ ಮಹೇಂದ್ರ ಆನೆಗೆ ನಡೆಸಲು ಮುಂದಾಗಿದ್ದ ಮರದ ಅಂಬಾರಿ ತಾಲೀಮಿಗೆ ವರುಣನ ಅಡ್ಡಿಯಾಗಿದೆ.
ಶುಕ್ರವಾರದಿಂದ ಮರದ ಅಂಬಾರಿ ಹೊರಿಸಿ ಆನೆಗಳಿಗೆ ತಾಲೀಮು ನೀಡಲಾಗುತ್ತಿತ್ತು. ಮೊದಲ ದಿನ ಮಹೇಂದ್ರ ಆನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮರದ ಅಂಬಾರಿ ಕಟ್ಟಿ ತಾಲೀಮಿಗೆ ಸಿದ್ದತೆ ನಡೆಸಿದ್ದರು. ಆದರೆ ಭಾರಿ ಮಳೆಯಿಂದಾಗಿ ಮರದ ಅಂಬಾರಿಯ ಕೆಳಭಾಗದ ಹಾಸಿಗೆ ಹಾಗೂ ಹತ್ತಿಯ ಹಗ್ಗಗಳು ಒದ್ದೆಯಾಗಿ ಭಾರವಾಗಿವೆ. ಇದರಿಂದ ಆನೆಗೆ ಅಸೌಕರ್ಯ ಹಾಗೂ ಬಿಗಿತ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಆನೆಯ ಆರಾಮ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಂದಿನ ಮರದ ಅಂಬಾರಿ ತಾಲೀಮನ್ನು ಮುಂದೂಡಿಕೆ ಮಾಡಿದ್ದಾರೆ. ಅಲ್ಲದೆ ತಾಲೀಮಿನ ಪರಿಷ್ಕೃತ ದಿನಾಂಕ ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಈ ಬಾರಿ ಚಿನ್ನದ ಅಂಬಾರಿ ಹೊರುವ ರೇಸ್ನಲ್ಲಿ ಪ್ರಶಾಂತ, ಧನಂಜಯ, ಮಹೇಂದ್ರ, ಸುಗ್ರೀವ ಹಾಗೂ ಏಕಲವ್ಯ ಸೇರಿದಂತೆ ಐದು ಆನೆಗಳಿವೆ. ಈ ಎಲ್ಲ ಆನೆಗಳಿಗೂ ಮರದ ಅಂಬಾರಿ ಹೊರಿಸಿ ಹಂತ ಹಂತವಾಗಿ ತಾಲೀಮು ನೀಡಲಾಗುತ್ತಿದೆ.
ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ವಿಜಯದಶಮಿ ಜಂಬೂಸವಾರಿಯ ಪ್ರಮುಖ ಆನೆಯಾಗಿರುವ ಅಭಿಮನ್ಯು ಅಕ್ಟೋಬರ್ 5ರಂದು ಮೈಸೂರಿಗೆ ಆಗಮಿಸಲಿದ್ದಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.






