ಬೆಂಗಳೂರು,ಸೆಪ್ಟಂಬರ್,18,2026 (www.justkannada.in): ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸಮಯದಲ್ಲಿ ಇನ್ ಸ್ಟಾಗ್ರಾಮ್ನಲ್ಲಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಕೊಂಡಿದೆ. ನಂತರ ಭವಿಷ್ಯದ ದೃಷ್ಠಿಯಿಂದ ಯುವಕನ ವಿರುದ್ದದ ಪ್ರಕರಣ ರದ್ದುಗೊಳಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್ ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಅವಹೇಳನಕಾರಿ ಪೋಸ್ಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ಪುನೀತ್ ರಾಜ್ಕುಮಾರ್ ಅವರು ಮೇರುನಟ ಡಾ. ರಾಜ್ಕುಮಾರ್ ಅವರ ಪುತ್ರ. ಅವರು ನಿಧನರಾದಂತಹ ಸೂತಕದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದಗಳನ್ನು ಬಳಸಲಾಗಿದೆ ಎಂಬುದು ನಿಮಗಾದರೂ ಗೊತ್ತೇ?” ಎಂದು ಅರ್ಜಿದಾರನನ್ನು ಕ್ಲಾಸ್ ತೆಗೆದುಕೊಂಡರು. 
ಅರ್ಜಿದಾರ ರಿತ್ವಿಕ್ ಪರ ವಾದ ಮಂಡಿಸಿದ ವಕೀಲರು, “ರಿತ್ವಿಕ್ ಲಂಡನ್ ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾನೆ. ಆತನಿಗೆ ಈ ಪೋಸ್ಟ್ ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದು ತನ್ನ ಪ್ರಮಾದವನ್ನು ಒಪ್ಪಿಕೊಂಡು ರಿತ್ವಿಕ್ ಈಗಾಗಲೇ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾನೆ” ಎಂದು ಹೇಳಿದರು. ಅಲ್ಲದೆ ಯುವಕನ ಭವಿಷ್ಯವನ್ನು ಪರಿಗಣಿಸಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠವು, ಅಂತಿಮವಾಗಿ ಯುವಕನ ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತು.






