ನವದೆಹಲಿ,ಸೆಪ್ಟಂಬರ್,12,2026 (www.justkannada.in): ಇಂದಿನಿಂದ ಎರಡು ದಿನಗಳ ಕಾಲ ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆಯೋಜನೆ ಮಾಡಲಾಗಿದ್ದು ವಿದೇಶಿ ಗಣ್ಯರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ 2:35 ಬ್ರಿಕ್ಸ್ ನಾಯಕರ ಶೃಂಗಸಭೆ ಆರಂಭವಾಗಲಿದ್ದು, ಭಾರಿ ಭದ್ರತೆ ನಿಯೋಜಿಸಲಾಗಿದೆ. ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದ್ದು, ವಿವಿಧ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರು, ಸರ್ಕಾರದ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನವದೆಹಲಿಯ ಭಾರತ ಮಂಟಪಂ ಶೃಂಗಸಭೆಯ ಪ್ರಮುಖ ವೇದಿಕೆಯಾಗಿದೆ. ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸೇರಿದಂತೆ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ, ವ್ಯಾಪಾರ, ಹೂಡಿಕೆ, ಹಣಕಾಸು ವ್ಯವಸ್ಥೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಜಾಗತಿಕ ಆಡಳಿತ ಸುಧಾರಣೆ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ರಾಜಕೀಯದಲ್ಲಿ ಬಹುಧ್ರುವೀಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಕೂಡ ಪ್ರಮುಖ ಚರ್ಚೆಯ ವಿಷಯವಾಗಿದೆ.







