ಮೈಸೂರು,ಸೆಪ್ಟಂಬರ್,2,2026 (www.justkannada.in): ಬಹುಕೋಟಿ ಚಿನ್ನ ಹಗರಣದ ಚರ್ಚೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಂದು ಚಿನ್ನದ ವಂಚನೆ ಆರೋಪ ಕೇಳಿಬಂದಿದೆ. ಚಿನ್ನ ನೀಡುವುದಾಗಿ ಮಾಸಿಕ ಕಂತುಗಳಲ್ಲಿ ಹಣ ಕಟ್ಟಿಸಿಕೊಂಡು, ಇದೀಗ ಜುವೆಲ್ಲರಿ ಅಂಗಡಿ ಹಾಗೂ ಮಾಲೀಕರು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಗ್ರಾಹಕರಿಂದ ಕೇಳಿಬಂದಿದೆ.
ನಗರದ ವಿವೇಕಾನಂದ ವೃತ್ತದಲ್ಲಿರುವ ಮೊಹನ್ ಜ್ಯುವೆಲರಿ ವಿರುದ್ಧ ನೂರಾರು ಗ್ರಾಹಕರು ವಂಚನೆ ಆರೋಪ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಕಂತು ಕಟ್ಟಿಸಿಕೊಂಡು ಗ್ರಾಹಕರಿಗೆ ಚಿನ್ನ ನೀಡುವ ಮೂಲಕ ನಂಬಿಕೆ ಗಳಿಸಿದ್ದ ಸಂಸ್ಥೆ, ಈ ಬಾರಿ ಹೆಚ್ಚಿನ ಮೊತ್ತದ ಹಣ ಹೂಡಿಕೆ ಮಾಡಿಸಿಕೊಂಡಿದೆ ಎನ್ನಲಾಗಿದೆ.
ಆದರೆ, ಕಳೆದ ಒಂದು ವಾರದಿಂದ ಜುವೆಲ್ಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕರ ಮನೆಯೂ ಖಾಲಿಯಾಗಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಹಣ ಕಳೆದುಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಜುವೆಲ್ಲರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಹಲವರು ದೂರು ದಾಖಲಿಸಿ, ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಜುವೆಲ್ಲರಿ ಮಾಲೀಕರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಹಾಗೂ ಎಷ್ಟು ಮೊತ್ತದ ಹಣ ವಂಚನೆಯಾಗಿದೆ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಚಿನ್ನದ ಹೆಸರಿನಲ್ಲಿ ಕಂತು ಕಟ್ಟಿ, ಕೊನೆಗೆ ಹಣವೂ ಇಲ್ಲ… ಚಿನ್ನವೂ ಇಲ್ಲ! — ಮೈಸೂರಿನ ನೂರಾರು ಗ್ರಾಹಕರೀಗ ನ್ಯಾಯಕ್ಕಾಗಿ ಪೊಲೀಸರ ಬಾಗಿಲು ತಟ್ಟಿದ್ದಾರೆ.
ENGLISH SUMMARY..
Another Gold Scam Rocks Mysuru!
Hundreds of customers allege they were cheated after paying monthly instalments to Mohan Jewellery at Vivekananda Circle, with a promise of receiving gold.
The jewellery shop has reportedly remained closed for a week, while the owner’s residence is also said to be vacant.
Several customers have filed complaints at Kuvempunagar Police Station, demanding their money back.
Police have taken the jewellery owner into custody and are questioning him.
Key words: Another, gold scam, Mysore






