ತುಮಕೂರು,ಆಗಸ್ಟ್,27,2026 (www.justkannada.in): ಇಬ್ಬರು ಮಕ್ಕಳೊಂದಿಗೆ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಾಯಿ ರಾಬಿಯಾ ಹಾಗೂ ಆಕೆಯ ಮಕ್ಕಳಾದ ತಮ್ಮನ್ನಾ (9) ಮತ್ತು ಸಿಮ್ರಾನ್ (5) ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಾಬಿಯಾ ತಮ್ಮಿಬ್ಬರು ಮಕ್ಕಳೊಂದಿಗೆ ಶಿರಾದಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ವಸತಿಗಾಗಿ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದ ಮಹಿಳೆ
ಮೃತ ರಾಬಿಯಾ ಅವರು ಸ್ವಂತ ಸೂರನ್ನು ಪಡೆಯುವ ಸಲುವಾಗಿ 2025ರಲ್ಲಿ ತುಮಕೂರಿನಲ್ಲಿ ನಡೆದಿದ್ದ ಸರ್ಕಾರದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ರಾಬಿಯಾ ಅವರು ಖುದ್ದಾಗಿ ಸಿದ್ದರಾಮಯ್ಯರನ್ನ ಭೇಟಿಯಾಗಿ ವಸತಿಗಾಗಿ ಮನವಿ ಮಾಡಿದ್ದರು. ಬಡ ಮಹಿಳೆಯ ಅಹವಾಲಿಗೆ ತಕ್ಷಣ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು, ಅವರಿಗೆ ನಿವೇಶನ ಮಂಜೂರು ಮಾಡಲು ಆದೇಶಿಸಿದ್ದರು.
ಆದರೆ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದು, ಘಟನಾ ಸ್ಥಳಕ್ಕೆ ಶಿರಾ ಟೌನ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ , ಪ್ರಕರಣ ದಾಖಲಿಸಿಕೊಂಡಿದ್ದಾರೆ.
Key words: Woman, commits suicide, , two children







