ಬೆಂಗಳೂರು,ಆಗಸ್ಟ್,21,2026 (www.justkannada.in): ದೊಡ್ಡಬಳ್ಳಾಪುರ ಮತ್ತು ಡಾಬಸಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಟೊಯೊಟಾದಂತಹ 8 ಅಗ್ರಗಣ್ಯ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು (ಒಟ್ಟು 14) ಒಡಂಬಡಿಕೆ ಮಾಡಿಕೊಂಡಿವೆ. ಕೆಲವು ವಿದೇಶಿ ವಿ.ವಿ.ಗಳು ತಮ್ಮ ಅಗತ್ಯಕ್ಕೆ ಹೊಂದುವಂತಹ ಕಟ್ಟಡಗಳನ್ನು (ಬಿಲ್ಡ್ ಟು ಸೂಟ್) ಕೇಳುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಮಾದರಿ ಅಳವಡಿಸಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ನಾಮಕರಣ ಸದಸ್ಯ ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ ಉತ್ತರ ನೀಡಿದರು.
ಒಟ್ಟು 5 ಸಾವಿರ ಎಕರೆಯಲ್ಲಿ ಕ್ವಿನ್ ಸಿಟಿ ಅಸ್ತಿತ್ವಕ್ಕೆ ಬರುತ್ತಿದೆ. ಈಗ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಟೊಯೊಟಾ ಕಂಪನಿಯು ತನ್ನ ತವರಾಗಿರುವ ಜಪಾನಿನಲ್ಲಿ ಕೂಡ ಹೊಂದಿಲ್ಲದಂತಹ ಅತ್ಯುತ್ಕೃಷ್ಟ ಗುಣಮಟ್ಟದ ನಾವೀನ್ಯತಾ ಕೇಂದ್ರವನ್ನು ಇಲ್ಲಿ ಸ್ಥಾಪಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದ ವೈದ್ಯಕೀಯ ಸಂಸ್ಥೆಗಳು, ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆಯ ಕ್ಯಾಂಪಸ್ ಕೂಡ ಇಲ್ಲಿ ಬರಲಿವೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.
ಜಾಗತಿಕವಾಗಿ 2ನೇ ಶ್ರೇಯಾಂಕ ಹೊಂದಿರುವ ಲಂಡನ್ನಿನ ಇಂಪೀರಿಯಲ್ ಕಾಲೇಜು, 19ನೇ ಶ್ರೇಯಾಂಕದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, 139ನೇ ಸ್ಥಾನದಲ್ಲಿರುವ ಲಿವರ್ ಪೂಲ್ ವಿವಿ, 164ನೇ ಸ್ಥಾನದಲ್ಲಿರುವ ಲ್ಯಾಂಕಾಸ್ಟರ್ ವಿವಿ, 241ನೇ ಸ್ಥಾನದಲ್ಲಿರುವ ಲಾ ಟ್ರೋಬ್ ವಿವಿ ಮತ್ತು 374ನೇ ಸ್ಥಾನದಲ್ಲಿರುವ ಫ್ಲಿಂಡರ್ಸ್ ವಿವಿ ರಾಜ್ಯ ಸರಕಾರದೊಂದಿಗೆ ಈಗಾಗಲೇ ಒಡಂಬಡಿಕೆಗೆ ಅಂಕಿತ ಹಾಕಿವೆ. ಈ ಪೈಕಿ ಸೌತ್ ವೇಲ್ಸ್ ಮತ್ತು ಲಿವರ್ಪೂಲ್ ವಿ.ವಿ.ಗಳು ಬೆಂಗಳೂರಿನ ಮಾನ್ಯತಾ ಬಿಝಿನೆಸ್ ಪಾರ್ಕ್ ಮತ್ತು ವೈಟ್ ಫೀಲ್ಡ್ ನಲ್ಲಿರುವ ಅಲೆಂಬಿಕ್ ಸಿಟಿ ಸಂಕೀರ್ಣದಲ್ಲಿ ಕ್ಯಾಂಪಸ್ ಆರಂಭಿಸಿವೆ. ಇವು ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಇಂಪೀರಿಯಲ್ ಕಾಲೇಜ್ ನಮ್ಮಲ್ಲಿ ಇನ್ನೋವೇಶನ್ ಹಬ್ ಸ್ಥಾಪಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಕೆಲವು ಕಂಪನಿಗಳು/ ವಿ.ವಿ.ಗಳು ‘ಬಿಲ್ಡ್ ಟು ಸೂಟ್’ ಮಾದರಿ ಬಯಸುತ್ತಿವೆ. ಇಂತಹ ಕಂಪನಿಗಳಿಗೆ ಅಗತ್ಯಗಳಿಗೆ ತಕ್ಕಂತೆ ಕಟ್ಟಡ ನಿರ್ಮಿಸಿ ಕೊಡುವ ಚಿಂತನೆ ಇದೆ. ಇಂತಹ ಕಡೆಗಳಲ್ಲಿ ಮುಂದಿನ 30-40 ವರ್ಷಗಳ ಕಾಲ ಅವು ಸುಗಮವಾಗಿ ಸಕ್ರಿಯವಾಗಿರಬಹುದು. ಕಟ್ಟಡ ಕೊಡುವಾಗ ಸಂಸ್ಥೆಗಳ ಅರ್ಹತೆಗೆ ಮಾತ್ರ ಆದ್ಯತೆ ಕೊಡಲಾಗುವುದು. ಕ್ವಿನ್ ಸಿಟಿಯಲ್ಲಿ ವಸತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳು ಕೂಡ ಇರಲಿವೆ. ಈ ಬಗ್ಗೆ ಇನ್ನೊಂದು ವರ್ಷದಲ್ಲಿ ಸೂಕ್ತ/ಪ್ರತಿಷ್ಠಿತ ಸಂಸ್ಥೆಗಳಿಗೆ ಜಾಗ ಕೊಡುವ ಕೆಲಸ ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.
ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್
ಮೈಸೂರಿನಲ್ಲಿ ಕೂಡ ಆಧುನಿಕ ಕೈಗಾರಿಕೆಗಳು ಬರಬೇಕು ಎಂಬ ಸದಸ್ಯ ಕೆ.ಶಿವಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಅಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲಿ ಸುಸಜ್ಜಿತ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆದರೆ ಅಲ್ಲಿಯ ಸ್ಥಳೀಯರು ತಮ್ಮ ಭೂಮಿಗೆ ಬೆಂಗಳೂರಿನಲ್ಲಿ ಇರುವಷ್ಟೇ ಪರಿಹಾರ ಕೇಳುತ್ತಿದ್ದು, ಇದು ಕಗ್ಗಂಟಾಗಿದೆ. ಇದನ್ನು ಬಗೆಹರಿಸಿಕೊಂಡು ಮುಂದುವರಿಯಲಾಗುವುದು ಎಂದಿದ್ದಾರೆ.
ನಂಜನಗೂಡಿನ ಬಳಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಜಾಗ ಗುರುತಿಸಲಾಗಿತ್ತು. ರಾಜ್ಯದಲ್ಲೇ ಸಂಶೋಧನೆ ಮತ್ತು ವಿನ್ಯಾಸದ ಜತೆಗೆ ಉತ್ಪಾದನೆ ಕೂಡ ಆಗಬೇಕು. ಆದರೆ ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ (ಪಿಎಲ್ಐ) ಪಡೆಯಲು ಕಂಪನಿಗಳು ಕೇಂದ್ರ ಸರಕಾರವನ್ನು ಕೋರಬೇಕು. ಈ ಹಂತದಲ್ಲಿ ಕೇಂದ್ರ ಸರ್ಕಾರವು ಅಂತಹ ಸಂಸ್ಥೆಗಳಿಗೆ ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರುತ್ತಿವೆ. ಇದರ ಹಿಂದೆ ಕೇಂದ್ರದ ರಾಜಕೀಯ ನಿರ್ಧಾರವಿದೆ. ಆದರೂ ರಾಜ್ಯಕ್ಕೆ ಲ್ಯಾಮ್ ರೀಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ತರಹದ ದೈತ್ಯ ಸೆಮಿಕಂಡಕ್ಟರ್ ಉದ್ದಿಮೆಗಳನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಂತದಲ್ಲಿ ಮಾತನಾಡಿದ ಕೆ.ಶಿವಕುಮಾರ್, ‘ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತು ನಮ್ಮಲ್ಲಿಗೆ ಹೆಚ್ಚಿನ ಬಂಡವಾಳ ತರಲು ಪಾಟೀಲರು ಶ್ರಮಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಉದ್ಯೋಗಸೃಷ್ಟಿ, ಪ್ರಾದೇಶಿಕ ಸಮಾನತೆ ಮತ್ತು ಆರ್ಥಿಕ ವರಮಾನ, ರಫ್ತು ಚಟುವಟಿಕೆ ಸಾಧ್ಯವಾಗುತ್ತಿದೆ. ಇದು ಅಭಿನಂದನಾರ್ಹ ಸಂಗತಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Key words: Government’ foreign university, campuses, Queen City, Minister, M.B. Patil, K.Shivakumar







