Thursday, August 13, 2026

BDA Apartments

Home Front Page ಡಾ.ಹೆಚ್ ಸಿ ಮಹದೇವಪ್ಪಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ:  ಮೈಸೂರಿನಲ್ಲಿ ಪ್ರತಿಭಟನೆ, ಆಕ್ರೋಶ

ಡಾ.ಹೆಚ್ ಸಿ ಮಹದೇವಪ್ಪಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ:  ಮೈಸೂರಿನಲ್ಲಿ ಪ್ರತಿಭಟನೆ, ಆಕ್ರೋಶ

ಮೈಸೂರು,ಆಗಸ್ಟ್,13,2026 (www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ  ಹಿರಿಯ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗ, ಪ್ರಗತಿಪರ, ದಲಿತ ಸಂಘಟನೆಗಳ ವತಿಯಿಂದ  ಇಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಪುರಭವನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷ, ಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಚಾಮರಾಜ ಒಡೆಯರ್‌ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಡಾ.ಎಚ್.ಸಿ.ಮಹದೇವಪ್ಪ ದಲಿತ ಸಮುದಾಯದ ಹಿರಿಯ ನಾಯಕರು. ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸಾಮರ್ಥ್ಯ,ಪ್ರತಿಭೆ ಹೊಂದಿದ್ದರೂ ಸಂಪುಟದಲ್ಲಿ ಅವಕಾಶ ಕೊಡದೆ ಕಡೆಗಣಿಸಿರುವುದು ಖಂಡನೀಯ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುತ್ರ ವ್ಯಾಮೋಹದಿಂದಾಗಿ ತಮ್ಮ ಆಪ್ತರನ್ನು ಕೈ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಹಿಂದೆ ದಲಿತ ಸಮುದಾಯ ಇರುವುದಕ್ಕೆ ಮಹದೇವಪ್ಪ ಕಾರಣ. ಆದರೆ ಇಂದು ಸ್ವಾರ್ಥಕ್ಕಾಗಿ ಮೌನವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು, ದೇವಲಾಪುರ ಸಿದ್ದರಾಜು, ಮರಿದೇವಯ್ಯ, ತುಂಬಸೋಗೆ ನಾಗಣ್ಣ, ಚಿನ್ನಣ್ಣ,ಜ್ಞಾನಪ್ರಕಾಶ್, ಬಸವರಾಜು, ಕುಮಾರ್ ಒಂಟಿಕೊಪ್ಪಲು, ರವಿಕೊಳಘಟ್ಟ, ನಂದೀಶ್, ಲೇಔಟ್ ರವಿ, ಎಚ್.ಎಸ್.ದಿನೇಶ್, ಕೆ.ಬಿ.ಸ್ವಾಮಿ, ಇಂದನ್‌ಬಾಬು, ಕೆಂಪಣ್ಣ, ನಾಡನಹಳ್ಳಿ ಪ್ರಕಾಶ್, ಶೇಖರ್ ಸೇರಿ  ಮತ್ತಿತರರು ಭಾಗವಹಿಸಿದ್ದರು.

Key words: Dr. H. C. Mahadevappa, ministerial post, Protest, Mysore