Wednesday, July 29, 2026

BDA Apartments

Home Front Page ಅತ್ಯಾಚಾರಿಗಳನ್ನ ಸಮರ್ಥಿಸಿದ್ದ ಜೋಶಿಗೆ ಶಿಕ್ಷಣ ಸಚಿವ ಸ್ಥಾನ: ಕನ್ನಡಿಗರೆಲ್ಲರೂ ತಲೆ ತಗ್ಗಿಸುವ ಸ್ಥಿತಿ- ಮಾಜಿ ಸಿಎಂ...

ಅತ್ಯಾಚಾರಿಗಳನ್ನ ಸಮರ್ಥಿಸಿದ್ದ ಜೋಶಿಗೆ ಶಿಕ್ಷಣ ಸಚಿವ ಸ್ಥಾನ: ಕನ್ನಡಿಗರೆಲ್ಲರೂ ತಲೆ ತಗ್ಗಿಸುವ ಸ್ಥಿತಿ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,29,2026 (www.justkannada.in):   ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ  ಕೇಂದ್ರ ಶಿಕ್ಷಣ ಸಚಿವ ಸ್ಥಾನವನ್ನ ಪ್ರಹ್ಲಾದ್ ಜೋಶಿ ಅವರಿಗೆ ನೀಡಿದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಹ್ಲಾದ ಜೋಷಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಹ್ಲಾದ್ ಜೋಷಿ ಅವರು ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ – ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್.ಎಸ್.ಎಸ್ ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ.

ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಹ್ಲಾದ ಜೋಷಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧಿ ಅವರು ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ.

ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಷಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಷಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: Prahlad Joshi, Central Education Minister, Former CM, Siddaramaiah