Wednesday, July 29, 2026

BDA Apartments

Home Front Page ಪ್ರಧಾನಿ ಮೋದಿ ಮಾಧ್ಯಮ ಜತೆ ಮಾತಾಡಲಿ : ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹ.

ಪ್ರಧಾನಿ ಮೋದಿ ಮಾಧ್ಯಮ ಜತೆ ಮಾತಾಡಲಿ : ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹ.

ಮೈಸೂರು, ಜುಲೈ, 28,2026 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಮೈಸೂರಿಗೆ ಆಗಮಿಸಿ ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಿರುವ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಉದ್ಘಾಟಿಸುತ್ತಿದ್ದಾರೆ. ಅಂದು ಪ್ರಧಾನಿ ಮೋದಿ ಅವರು ಮಾಧ್ಯಮಗಳ ಜೊತೆ ಮುಖಾಮುಖಿ ಭೇಟಿ ಅಥವಾ ಸಂವಾದ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್ ಎ ವೆಂಕಟೇಶ್, ದೇಶದ ಯುವಕರಿಗೆ ಆತ್ಮವಿಶ್ವಾಸ, ರಾಷ್ಟ್ರಭಕ್ತಿ ಹಾಗೂ ಸೇವಾ ಮನೋಭಾವದ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಆದರೆ, ದೇಶದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳು, ನಿರುದ್ಯೋಗ, ಶಿಕ್ಷಣ ಮತ್ತು ಅವಕಾಶಗಳ ಕೊರತೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾದ ಅಗತ್ಯವಿದೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ ನಲ್ಲಿ ನಡೆದ ಜೆನ್-ಜಿ ಯುವಕರ ಪ್ರತಿಭಟನೆ ದೇಶದ ಗಮನ ಸೆಳೆದಿದ್ದು, ಯುವಶಕ್ತಿಯ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದು ಯುವಕರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.  ಇಂತಹ ಸಂದರ್ಭದಲ್ಲಿ ಯುವಜನತೆಯನ್ನು ತಲುಪಲು ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಪ್ರಧಾನಿ ಮೋದಿ, ಯುವಕರ ನೈಜ ಪ್ರಶ್ನೆಗಳಿಗೂ ಉತ್ತರಿಸುವ ಮನೋಭಾವ ತೋರಬೇಕು ಎಂದು ಹೆಚ್.ಎ ವೆಂಕಟೇಶ್ ಸಲಹೆ ನೀಡಿದ್ದಾರೆ.

ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಅವರು ಒಂದೇ ಒಂದು ಬಾರಿಯೂ ಪತ್ರಕರ್ತರೊಂದಿಗೆ ಮುಕ್ತ ಮುಖಾಮುಖಿ ಸಂವಾದ ನಡೆಸಿಲ್ಲ ಎಂಬುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ಈ ನಡೆಗೆ ದೇಶದ ಮಾಧ್ಯಮ ವಲಯ ಮತ್ತು ವಿಪಕ್ಷಗಳು ನಿರಂತರವಾಗಿ ಟೀಕೆ ವ್ಯಕ್ತಪಡಿಸುತ್ತಿವೆ.

ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರ ಸ್ಮಾರಕ ಉದ್ಘಾಟನೆಗೆ ಮಾತ್ರ ಸೀಮಿತವಾಗದೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೈಸೂರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಕನಿಷ್ಠ ಮುಖಾಮುಖಿ ಭೇಟಿ ಅಥವಾ ಸಂವಾದ ನಡೆಸಬೇಕು ಎಂದು ಹೆಚ್ ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಯಾವುದೇ ಜನನಾಯಕರ ಜವಾಬ್ದಾರಿಯಾಗಿದೆ. ಸ್ವಾಮಿ ವಿವೇಕಾನಂದರು ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಸತ್ಯವನ್ನು ಧೈರ್ಯವಾಗಿ ಎದುರಿಸುವ ಮನೋಭಾವ ಬೆಳೆಸಿದ್ದರು. ಅವರ ಸ್ಮಾರಕ ಉದ್ಘಾಟನೆಗೆ ಆಗಮಿಸುವ ಪ್ರಧಾನಿ ಮೋದಿ ಅವರೂ ಅದೇ ಆದರ್ಶವನ್ನು ಪಾಲಿಸಿ ಜನರ ಪ್ರಶ್ನೆಗಳಿಗೆ ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಮುಕ್ತವಾಗಿ ಸ್ಪಂದಿಸಲಿ ಎಂದು   ಆಗ್ರಹಿಸುತ್ತೇನೆ ಎಂದಿದ್ದಾರೆ.

ENGLISH SUMMARY..

PM Modi Should Interact with Mysuru Media: KPCC Spokesperson H.A. Venkatesh

Mysuru: KPCC spokesperson H.A. Venkatesh has urged Prime Minister Narendra Modi, who is visiting Mysuru on August 1 to inaugurate the Swami Vivekananda Memorial at Ramakrishna Ashrama, to interact with local media during his visit.

He said Swami Vivekananda inspired generations of youth to think fearlessly and face challenges with confidence. Venkatesh noted that despite being in office for 12 years, Prime Minister Modi has never held an open press conference, drawing criticism from the Opposition and media.

Referring to the recent Gen Z protests at Jantar Mantar, he said the Centre was forced to respond to youth concerns and called on the Prime Minister to engage directly with journalists instead of relying only on social media and reels.

Venkatesh urged Modi to make use of his Mysuru visit to hold at least a brief interaction with local media, stating that answering questions from journalists is an essential part of democratic accountability.

Key words: PM Modi, Interact, Mysuru, Media, KPCC Spokesperson, H.A. Venkatesh