ಕರ್ನಾಟಕ ಪ್ರತಿಭಾನ್ವಿತ ಮಾನವ ಸಂಪನ್ಮೂಲ ತಯಾರಿಕಾ ಕೇಂದ್ರ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಜು.23:,2026 (www.justkannada.in): ಕರ್ನಾಟಕ ಪ್ರತಿಭಾನ್ವಿತ ಮಾನವ ಸಂಪನ್ಮೂಲ ತಯಾರಿಕಾ ಕೇಂದ್ರವಾಗಿದ್ದು, ಇಲ್ಲಿರುವ ಮಾನವ ಸಂಪನ್ಮೂಲ, ಹವಾಮಾನ ಹಾಗೂ ಸಂಸ್ಕೃತಿಗೆ ದೇಶದ ಬೇರೆ ಯಾವುದೇ ನಗರಗಳೂ ಸಾಟಿಯಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಸಂಗ್ರಹ ಕೇಂದ್ರದಲ್ಲಿ ಗುರುವಾರ ನಡೆದ ರಕ್ಷಣೆ ಹಾಗೂ ಏರೋಸ್ಪೇಸ್ ಕ್ಷೇತ್ರದ 15ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ ಸಮಿಟ್ ನಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಎಲೆಕ್ಟ್ರಾನಿಕ್ಸ್ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಪ್ರತಿ ಮಗುವಿನ ಕೈಯಲ್ಲಿ ಈಗ ಮೊಬೈಲ್ ಫೋನ್ ಗಳು ಬಂದಿವೆ. ಕರ್ನಾಟಕದಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿಂದ್ದು, ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು ತಯಾರು ಮಾಡಲಾಗುತ್ತಿದೆ. ಕರ್ನಾಟಕ ಮಾನವ ಸಂಪನ್ಮೂಲದ ತಯಾರಿಕಾ ಕೇಂದ್ರವಾಗಿದೆ. ಇದೇ ಕಾರಣಕ್ಕೆ ನೆಹರೂ ಅವರು ಬೆಂಗಳೂರಿನಲ್ಲಿ ರಕ್ಷಣಾ ಕ್ಷೇತ್ರದ ಉತ್ಪಾದನೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಹೆಚ್ಎಎಲ್, ಇಸ್ರೋ, ಐಐಟಿ, ಬಿಹೆಚ್ಇಎಲ್ ಸೇರಿದಂತೆ ಪ್ರಮುಖ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿದ್ದರು” ಎಂದು ತಿಳಿಸಿದರು.

“ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿಯಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಪಡೆದಿದ್ದಾರೆ. ಹೀಗಾಗಿ ಬೆಂಗಳೂರು ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ರಕ್ಷಣಾ ವಲಯದ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ. ಕೆಲವರು ಬೆಂಗಳೂರು ಹೊರತಾಗಿ ಮೈಸೂರು, ಬೆಳಗಾವಿಯಲ್ಲೂ ಘಟಕ ಆರಂಭಿಸಿದ್ದೀರಿ. ದೇಶದ ಭದ್ರತೆ ವಿಚಾರದಲ್ಲಿ ಎಲೆಕ್ಟ್ರಾನಿಕ್ಸ್ ಬಹಳ ಪ್ರಮುಖವಾಗಿದೆ. ನೀವು ದೇಶದ ಭದ್ರತೆಗಾಗಿ ಕೆಲಸ ಮಾಡುತ್ತಿದ್ದೀರಿ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು.

“ತಂತ್ರಜ್ಞಾನ, ಸಂಶೋಧನೆ ಹಾಗೂ ನಾವಿನ್ಯತೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಕ್ಷಣಾ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯಮಿಗಳಿಗೆ 25 ಕೋಟಿಯಷ್ಟು ಸಬ್ಸಿಡಿ ನೀಡಲು ಮುಂದಾಗಿರುವ ವಿಚಾರ ರಕ್ಷಣಾ ಇಲಾಖೆ ಕೈಪಿಡಿಯಿಂದ ತಿಳಿಯಿತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಭಾರತದಲ್ಲಿ ಏರೋಸ್ಪೇಸ್ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ನಾವು ದೇಶದ ಭವಿಷ್ಯ ಹಾಗೂ ಜಾಗತಿಕ ತಂತ್ರಜ್ಞಾನದ ವಿನ್ಯಾಸಕರಾಗಿದ್ದೇವೆ. ನಾವು ಆಟೋಮೊಬೈಲ್, ಆರೋಗ್ಯ ಕ್ಷೇತ್ರ, ಏರೋಸ್ಪೇಸ್, ರಕ್ಷಣೆ ಹಾಗೂ ಬೃಹತ್ ಯಂತ್ರಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದೇವೆ. ನಮ್ಮಲ್ಲಿ ಅತಿ ದೊಡ್ಡ ಸಂಶೋಧನೆ ಹಾಗೂ ಅಭಿವೃದ್ಧಿಯ ಸೌಲಭ್ಯವಿದ್ದು, ನೈಪುಣ್ಯತೆ ಕೇಂದ್ರವಾಗಿದೆ” ಎಂದು ತಿಳಿಸಿದರು.

“ಜಾಗತಿಕ ಸಾಮರ್ಥ್ಯ ಕೇಂದ್ರಗಳ ತಾಣವಾಗಿ ಕರ್ನಾಟಕ ರೂಪುಗೊಳ್ಳುತ್ತಿದ್ದು, 900ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳಿವೆ. ಅಮೆರಿಕದಿಂದ ಹೊರಗೆ ಗೂಗಲ್ ಸಂಸ್ಥೆಯ ಅತಿ ದೊಡ್ಡ ಕ್ಯಾಂಪಸ್ ಇರುವುದು ಬೆಂಗಳೂರಿನಲ್ಲಿ. ಕಳೆದ ವರ್ಷ ಮೋದಿ ಅವರು ಆಗಮಿಸಿದ್ದಾಗ, ಬೆಂಗಳೂರು ಜಾಗತಿಕ ನಗರವಾಗಿದೆ ಎಂದು ಹೇಳಿದ್ದರು. ನಾವು ಎಐ ಕ್ಷೇತ್ರಗಳಲ್ಲೂ ಮುಂಚೂಣಿ ಸಾಧಿಸುತ್ತಿದ್ದು, ಶಿಕ್ಷಣದಲ್ಲಿ ಎಐ ಬಳಕೆಗೆ ಮುಂದಾಗಿದ್ದೇವೆ. ಈ ರಾಜ್ಯ ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಪ್ರಗತಿ ಸಾಧಿಸಿ ರಾಜ್ಯ ಹಾಗೂ ದೇಶವನ್ನು ಪ್ರಗತಿ ಸಾಧಿಸುವಂತೆ ಮಾಡಬೇಕು. ಕಂಪನಿಗಳು ಬಲಿಷ್ಠವಾದರೆ, ನಾವುಗಳು ಶಕ್ತಿಶಾಲಿಯಾಗುತ್ತೇವೆ. ಇಡೀ ದೇಶ ಒಂದಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

“ಉದ್ಯಮಿಗಳು, ಸರ್ಕಾರ ಎಲ್ಲರೂ ಒಂದಾಗಿ ಇತಿಹಾಸ ಸೃಷ್ಟಿಸಬೇಕು. ನನಗೆ ಇತಿಹಾಸ ಓದುವುದಕ್ಕಿಂತ ಇತಿಹಾಸ ಸೃಷ್ಟಿಸುವುದರಲ್ಲಿ ಹೆಚ್ಚಿನ ಆಸಕ್ತಿ ಇದೆ. ಕರ್ನಾಟಕ ಇತಿಹಾಸ ನಿರ್ಮಿಸುತ್ತದೆ. ನಿಮ್ಮ ಸಲಹೆ ಏನೇ ಇದ್ದರೂ ನಮಗೆ ನೀಡಿ ನಮ್ಮ ಸರ್ಕಾರ ನಿಮ್ಮ ಸಲಹೆಗಳಿಗೆ ಮುಕ್ತವಾಗಿದೆ. ನಿಮ್ಮ ಜೊತೆ ಕೆಲಸ ಮಾಡಲು ಸಿದ್ಧವಾಗಿದೆ” ಎಂದು ಭರವಸೆ ನೀಡಿದರು.

Key words: Karnataka, hub for producing, talented, human resources, CM DK Shivakumar