ಬೆಂಗಳೂರು,ಜುಲೈ23,2026 (www.justkannada.in): 2026ರ ಗ್ಲಾಸ್ಕೋ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಕರ್ನಾಟಕದ ಇಬ್ಬರು ಪ್ರತಿಭಾನ್ವಿತ ಕ್ರೀಡಾಪಟುಗಳಾದ ಲೋಕೇಶ್ ಸತ್ಯನಾಥನ್ ಹಾಗೂ ಪ್ಯಾರಾ ಅಥೀಟ್ ಕೆ.ಎಸ್. ಶಿಲ್ಪಾ ಅವರಿಗೆ ರಾಜ್ಯ ಸರ್ಕಾರ ತಲಾ ₹5 ಲಕ್ಷ ಪ್ರೋತ್ಸಾಹ ಧನ ಮಂಜೂರು ಮಾಡಿದೆ.
ಲಾಂಗ್ ಜಂಪ್‌ನಲ್ಲಿ 8.21 ಮೀಟರ್ ದೂರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಹಾಗೂ ಅಮೆರಿಕದ ಪ್ರತಿಷ್ಠಿತ NCAA ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಲೋಕೇಶ್ ಸತ್ಯನಾಥನ್ ಅವರಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ನೀಡಲಾಗುವ ಯೋಜನೆಯಡಿ ₹5 ಲಕ್ಷ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.
ಅದೇ ರೀತಿ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಪ್ಯಾರಾ ಅಥೀಟ್ ಕೆ.ಎಸ್. ಶಿಲ್ಪಾ ಅವರು ಸಹ 2026ರ ಗ್ಲಾಸ್ಕೋ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಅವರಿಗೆ ಕೂಡ ರಾಜ್ಯ ಸರ್ಕಾರದಿಂದ ₹5 ಲಕ್ಷ ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ. ಈ ಕುರಿತು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರ ನೀಡಿರುವ ಈ ಪ್ರೋತ್ಸಾಹ ಧನವು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಾಗೆಯೇ ಇಬ್ಬರು ಕ್ರೀಡಾಪಟುಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.
Key words: Lokesh Satyanathan, para-athlete, Shilpa, Glasgow Commonwealth Games










