ಮೈಸೂರು,ಜುಲೈ,23,2026 (www.justkannada.in): ಅತ್ತಿಗೋಡು ಸರ್ಕಾರಿ ಪ್ರೌಢ ಶಾಲೆಯು “2025-26ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿ”ಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೊಡುಗೆಯು ಅಪಾರವಾಗಿದೆ.
ಪಿರಿಯಾಪಟ್ಟಣ ತಾಲ್ಲೂಕು ಅತ್ತಿಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಸರ್ಕಾರಿ ಪ್ರೌಢ ಶಾಲೆಯು ಮಾದರಿ ಶಾಲೆಯಾಗಿದ್ದು, ಈ ಶಾಲೆಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಸುಮಾರು 49 ಲಕ್ಷ ರೂ. ಹಾಗೂ 15ನೇ ಹಣಕಾಸು ಅನುದಾನದಡಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2015-16ರಲ್ಲಿ 2,95,000 ರೂ. ವೆಚ್ಚದಲ್ಲಿ ಆಟದ ಮೈದಾನ, 2019-20ರಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್, 2020-21ನೇ ಸಾಲಿನಲ್ಲಿ 9,50,000 ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು, 2022-23ನೇ ಸಾಲಿನಲ್ಲಿ 9,50,000 ರೂ. ವೆಚ್ಚದಲ್ಲಿ ಬ್ಯಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್, 2022-23ನೇ ಸಾಲಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ ನಿರ್ಮಿಸಿಕೊಡುವ ಮೂಲಕ ಶಾಲೆಗೆ ಅಪಾರ ಕೊಡುಗೆ ನೀಡಲಾಗಿದೆ.
15ನೇ ಹಣಕಾಸು ಅನುದಾನದಡಿಯಲ್ಲಿ 2019-20ನೇ ಸಾಲಿನಲ್ಲಿ 40 ಸಾವಿರ ವೆಚ್ಚದಲ್ಲಿ ಬೋರ್ ವೆಲ್ ನಿಂದ ಆಟದ ಮೈದಾನದವರೆಗೆ ಪೈಪ್ ಲೈನ್ ವ್ಯವಸ್ಥೆ, 2019-20ನೇ ಸಾಲಿನಲ್ಲಿ 67 ಸಾವಿರ ರೂ. ವೆಚ್ಚದಲ್ಲಿ ಕಮೋಡ್ ಶೌಚಾಲಯ, 2020-21ನೇ ಸಾಲಿನಲ್ಲಿ 69 ಸಾವಿರ ವೆಚ್ಚದಲ್ಲಿ ಊಟದ ಪ್ಲಾಟ್ ಫಾರಂ ನಿರ್ಮಾಣ, 2021-22ನೇ ಸಾಲಿನಲ್ಲಿ 48 ಸಾವಿರ ವೆಚ್ಚದಲ್ಲಿ ಇನ್ಸಿರೇಟರ್ ವ್ಯವಸ್ಥೆ, 2022-23ನೇ ಸಾಲಿನಲ್ಲಿ 68 ಸಾವಿರ ವೆಚ್ಚದಲ್ಲಿ ಬಣ್ಣ ಹೊಡೆಸಿಕೊಡಲಾಗಿದೆ, 2023-24ನೇ ಸಾಲಿನಲ್ಲಿ 60 ಸಾವಿರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್ ಲೈನ್ ನಿರ್ಮಾಣ ವ್ಯವಸ್ಥೆ ಮಾಡುವ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ.
ಆರ್ ಒ ಪ್ಲಾಂಟ್, ಹೈಟೆಕ್ ಶೌಚಾಲಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಕೇಂದ್ರ ಸರ್ಕಾರದ ಮಾನದಂಡಗಳನ್ನು ಅನುಸರಿಸುವ ಮೂಲಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯ ಅಂತಿಮಪಟ್ಟಿ ಪ್ರಕಟಿಸಿದ್ದು, ಶಾಲೆಯ ಈ ಸಾಧನೆ ಜಿಲ್ಲೆಗಷ್ಟೇ ಅಲ್ಲದೇ ರಾಜ್ಯಕ್ಕೂ ಹೆಮ್ಮೆ ತಂದಿದೆ.
ರಾಜ್ಯದ ಒಟ್ಟು ಮೂರು ಶಾಲೆಗಳು ಈ ಪ್ರಶಸ್ತಿಗೆ ಭಾಜನವಾಗಿದ್ದು, ಸರ್ಕಾರಿ ಪ್ರೌಢಶಾಲೆಗಳ ಪೈಕಿ ಇದು ಪ್ರಶಸ್ತಿ ಪಡೆದ ಏಕೈಕ ಶಾಲೆಯಾಗಿದೆ. ಉಡುಪಿ ಜಿಲ್ಲೆಯ ಮುಲ್ಕಾಡು ಎಲ್ಲಾರೆ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಂಗಳೂರು ಗ್ರಾಮಾಂತರದ ಕನ್ನಮಂಗಲ ಹಿರಿಯ ಪ್ರಾಥಮಿಕ ಶಾಲೆಗಳೂ ಪ್ರಶಸ್ತಿಗೆ ಭಾಜನವಾಗಿವೆ.
ರಾಜ್ಯದಿಂದ 20 ಶಾಲೆಗಳು ರಾಷ್ಟ್ರಮಟ್ಟಕ್ಕೆ ಶಿಫಾರಸಾಗಿದ್ದವು. ಅಂತಿಮವಾಗಿ ದೇಶಾದ್ಯಂತ 191 ಶಾಲೆಗಳು ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿವೆ.
ಆಯ್ಕೆ ಮಾನದಂಡಗಳು : ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ ಮತ್ತು ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿದ್ಯಾರ್ಥಿಗಳಲ್ಲಿ ನಡವಳಿಕೆ ಮತ್ತು ಸಾಮರ್ಥ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ ಒಟ್ಟು 100 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿತ್ತು. ಅತ್ತಿಗೋಡು ಶಾಲೆಯು ಈ ಎಲ್ಲ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಹಸಿ, ಒಣ ಕಸ ವಿಲವೇವಾರಿ, ಮಳೆ ನೀರು ಕೂಯ್ಲು, ಮುಟ್ಟಿನ ಬಗ್ಗೆ ವಿದ್ಯಾರ್ಥಿನಿಯರಿಗೆ ವೈದ್ಯರಿಂದ ಅರಿವು, ನಾಯಕತ್ವ ಬೆಳೆಸುವುದು ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಪ್ರಶಸ್ತಿ ಗಳಿಸಿದೆ.
ಈ ಬಗ್ಗೆ ಮಾತನಾಡಿರುವ ಶಾಲೆಯ ಮುಖ್ಯಶಿಕ್ಷಕ ನಾಗಶೆಟ್ಟಿ, ನಮ್ಮಶಾಲೆಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಅಪಾರ ನೆರವು ದೊರೆತಿದೆ. ಗ್ರಾಮಪಂಚಾಯಿತಿ ಸಹಕಾರ ಅಪಾರವಾಗಿದೆ. ಗ್ರಾಮಪಂಚಾಯಿತಿ ಸಹಕಾರ ಹೆಚ್ಚಿದಷ್ಟು ಶಾಲೆಗಳು ಅಭಿವೃದ್ಧಿಯು ಉತ್ತಮವಾಗಿರುತ್ತದೆ ಎಂದಿದ್ದಾರೆ.
ಪಿರಿಯಾಪಟ್ಟಣ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್.ಡಿ.ಬಿ ಮಾತನಾಡಿ, ನಮ್ಮ ತಾಲ್ಲೂಕಿನ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತೋಷವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಹಕಾರ ಹಾಗೂ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ಶಾಲೆಯ ಆಡಳಿತ ಮಂಡಳಿ ಕಾರ್ಯವು ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಸಾಧ್ಯವಾಗಿದೆ.
Key words: National level award, Atthigodu, Government High School










