ಮೈಸೂರು, ಜೂ.27: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ ಡೆನ್ ಬಾರ್) ನಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಮೈಸೂರು ಅಬಕಾರಿ ಉಪ ಆಯುಕ್ತ (ಡಿಸಿ) ನಾಗರಾಜಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಘಟನೆ ನಡೆದು ಒಂದು ವಾರ ಕಳೆದರೂ ಜಿಲ್ಲಾ ಅಬಕಾರಿ ಇಲಾಖೆಯ ಮುಖ್ಯಸ್ಥರಾಗಿರುವ ನಾಗರಾಜಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ “ ಜಸ್ಟ್ ಕನ್ನಡ” ಸರಣಿ ವರದಿಗಳನ್ನು ಪ್ರಕಟಿಸಿ ಪ್ರಶ್ನೆ ಎತ್ತಿತ್ತು. ಇದರ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಅಮಾನತು ಆದೇಶ ಹೊರಡಿಸಿರುವುದು ಗಮನಾರ್ಹವಾಗಿದೆ.
ಈ ವಿಷಯವನ್ನು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಜಸ್ಟ್ ಕನ್ನಡಕ್ಕೆ ದೃಢಪಡಿಸಿದ್ದಾರೆ.

ಏನಿದು ಪ್ರಕರಣ?
ದಟ್ಟಗಳ್ಳಿಯ ಮಾರಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿರುವ ಫಾಕ್ಸ್ ಡೆನ್ ಬಾರ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅಗ್ನಿ ಸುರಕ್ಷತೆ, ಪರವಾನಗಿ ಹಾಗೂ ನಿಯಮ ಪಾಲನೆಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿದ್ದವು.

ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ನಂತರ ಅಬಕಾರಿ ಇಲಾಖೆಯ ಕೆಲ ಸಿಬ್ಬಂದಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿತ್ತು.
ಡಿಸಿ ವಿರುದ್ಧ ಕ್ರಮಕ್ಕೆ ಒತ್ತಾಯ:
ಆದರೆ, ಇಲಾಖೆಯ ಮುಖ್ಯಸ್ಥರಾಗಿರುವ ಅಬಕಾರಿ ಡಿಸಿ ನಾಗರಾಜಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಘಟನೆ ನಡೆದ ತಕ್ಷಣವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಕರಣದಲ್ಲಿ ಜವಾಬ್ದಾರಿ ನಿಗದಿಪಡಿಸಿ, ಅಬಕಾರಿ ಡಿಸಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಆದರೂ ಹಲವು ದಿನಗಳ ಕಾಲ ಯಾವುದೇ ಶಿಸ್ತು ಕ್ರಮ ಜರುಗದ ಹಿನ್ನೆಲೆಯಲ್ಲಿ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಜಸ್ಟ್ ಕನ್ನಡ ಕೂಡ ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ, “ಅಬಕಾರಿ ಡಿಸಿ ವಿರುದ್ಧ ಕ್ರಮ ಯಾವಾಗ?” ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು.
ಕಡೆಗೂ ಅಮಾನತು ಆದೇಶ:
ಇದೀಗ ಸರ್ಕಾರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಗ್ನಿ ದುರಂತ ಪ್ರಕರಣದಲ್ಲಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಂಡಂತಾಗಿದೆ.

ಅಗ್ನಿ ದುರಂತಕ್ಕೆ ಕಾರಣವಾದ ಲೋಪಗಳು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳ ಕುರಿತು ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಗಳು ಕೈಗೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ, ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
Key words: Mysuru, Fox Den Bar Fire, Excise DC, Nagarajappa, Suspended

SUMMARY:
Mysuru Fox Den Bar Fire: Excise DC Nagarajappa Suspended
Mysuru: The Karnataka government has finally suspended Mysuru Excise Deputy Commissioner Nagarajappa in connection with the tragic fire at Mara Bar & Restaurant (Fox Den Bar) in Dattagalli, which claimed two lives and injured several others.
The action comes a week after the incident and follows growing criticism over the delay in taking disciplinary measures against the district’s top Excise official. Earlier, several Excise Department and Mysuru City Corporation staff members had been suspended, while Nagarajappa remained untouched.

Mysuru District In-charge Minister Dr. Yathindra Siddaramaiah had visited the accident site and directed officials to recommend action against the Excise DC. However, no immediate action was taken.
Mysuru Deputy Commissioner Lakshmikanth Reddy has confirmed the suspension order. The investigation into the fire tragedy is continuing.







