ಮೈಸೂರು,ಆಗಸ್ಟ್,12,2026 (www.justkannada.in): ದೇಶವೇ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಣೆಗೆ ಸಿದ್ಧತೆ ನಡೆಸಿರುವಂತೆ ವಿಬಿ ಜಿ ರಾಮ್ ಜಿ (ಮ-ನರೇಗಾ) ಯೋಜನೆಯಡಿ ಅಭಿವೃದ್ಧಿ ಪಡಿಸಿರುವ 85 ಅಮೃತ ಸರೋವರ ದಂಡೆಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಿ ಜಲಸಂರಕ್ಷಣೆಯ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಕಲ ಸಿದ್ಧತೆ ನಡೆಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿಬಿ ಜಿ ರಾಮ್ ಜಿ (ಮ-ನರೇಗಾ) ಯೋಜನೆಯಡಿ ಅಭಿವೃದ್ಧಿ ಪಡಿಸಿರುವ 85 ಅಮೃತ ಸರೋವರಗಳ ದಂಡೆ ಮೇಲೂ ಗಣ್ಯರಿಂದ ಧ್ವಜಾರೋಹಣ ನೇರವೇರಿಸಿ ರಾಷ್ಟ್ರಗೀತೆಯ ನಮನ ಸಲ್ಲಿಸಲಾಗುವುದು. ಭಾಗವಹಿಸಿದ ಎಲ್ಲರಿಂದ ತಿರಂಗಯಾತ್ರೆ, ಸ್ಥಳೀಯರು ಹಾಗೂ ಶಾಲಾ ಮಕ್ಕಳಿಂದ ದೇಶ ಭಕ್ತಿಗೀತೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಪರಿಸರ ಸಂರಕ್ಷಣೆ ದೃಷ್ಠಿಯಿಂದ ಸ್ವಾತಂತ್ರ್ಯೋತ್ಸವ ನೆನಪಿಗಾಗಿ ಗಿಡ ನೆಡುವುದು. ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ವೈಯಕ್ತಿಕ ಮತ್ತು ಸಮುದಾಯದ ಜಲ ಸಂರಕ್ಷಣೆ ಕಾಮಗಾರಿಗಳ ಬಗ್ಗೆ ಹಾಗೂ ಜೀವನೋಪಾಯ ಭದ್ರತೆಗಾಗಿ ಗ್ರಾಮೀಣ ಜನರು ವೈಯಕ್ತಿಕ ಸೌಲಭ್ಯಗಳನ್ನು ವಿಬಿ ಜಿ ರಾಮ್ ಜಿ ಯೋಜನೆಯಡಿ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲು ತಯಾರಿ ನಡೆಸಿದೆ.
ಗ್ರಾಮದ ಜನಪ್ರತಿನಿಧಿಗಳು, ಶಾಲಾ ಮಕ್ಕಳು, ಗ್ರಾಮಸ್ಥರು, ಯುವಕ್ಲಬ್, ಸ್ವಸಹಾಯ ಸಂಘದ ಸದಸ್ಯರು, ಸಮುದಾಯ ಸಂಘ ಹಾಗೂ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗುವ ಮೂಲಕ ಈ ಬಾರಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವಕ್ಕೆ ಮುಂದಾಗಿರುವುದು ವಿಶೇಷ.
ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ 16, ಹುಣಸೂರು 16, ಮೈಸೂರು 15, ನಂಜನಗೂಡು 5, ಪಿರಿಯಾಪಟ್ಟಣ 4, ಸಾಲಿಗ್ರಾಮ 6, ಸರಗೂರು 8 ಮತ್ತು ತಿ.ನರಸೀಪುರ 15 ಸೇರಿ ಒಟ್ಟು 85 ಅಮೃತ ಸರೋವರ ಕೆರೆಗಳ ದಂಡೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಲಿದೆ.
ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಠಿಸಲು ಪ್ರೇರೆಪಿಸುವುದು. ಜತೆಗೆ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಯುಕ್ತಿಕ ಹಾಗೂ ಸಮುದಾಯದ ಜಲ ಸಂರಕ್ಷಣೆ ಕಾರ್ಯಕ್ರಮಗಳ ಭದ್ರತೆಗಳ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಗುತ್ತಿದೆ ಎಂದು ಮೈಸೂರು ಜಿಪಂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಸ್.ಯುಕೇಶ್ ಕುಮಾರ್,ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಅಭಾವ, ಅಂತರ್ಜಲ ಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ 85 ಅಮೃತ ಸರೋವರಗಳಲ್ಲೂ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುವುದು. ಅಲ್ಲದೆ, ಸ್ವಾತಂತ್ರ್ಯಕ್ಕಾಗಿ ಸೇವೆ ಸಲ್ಲಿಸಿ ತ್ಯಾಗ ಮಾಡಿದವರ ಸ್ಮರಿಸುವ ಮೂಲಕ ಅವರನ್ನು ಗೌರವಿಸುವ ಕೆಲಸ ಮಾಡಲಾಗುವುದು ಎಂದು ಮೈಸೂರು ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಭೀಮಪ್ಪ ಕ.ಲಾಳಿ ತಿಳಿಸಿದ್ದಾರೆ.
Key words: 80th Independence Day, flag, fly, again, lakes, Mysore






