ಮೈಸೂರು,ಜೂನ್,15,2026 (www.justkannada.in): ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಪಾದಚಾರಿ ಮಾರ್ಗವನ್ನೇ ಅತಿಕ್ರಮಿಸಿ ಬೃಹತ್ ಗಾತ್ರದ ಜಾಹೀರಾತು ಫಲಕ ಅಳವಡಿಸಿರುವ ಘಟನೆ ನಗರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಕಾಳಿದಾಸ ರಸ್ತೆಯಲ್ಲಿ, ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರ ನೂತನ ನಿವಾಸದ ಸಮೀಪ ಈ ಕಾನೂನು ಉಲ್ಲಂಘನೆ ಕಂಡುಬಂದಿದೆ.
ಹೊರ ರಾಜ್ಯದ ಖಾಸಗಿ ಅಂಗಡಿ ಮಳಿಗೆಯೊಂದರ ಪ್ರಚಾರಕ್ಕಾಗಿ ಅಳವಡಿಸಲಾಗಿರುವ ಈ ಬೃಹತ್ ಜಾಹೀರಾತು ಫಲಕ ಸಂಪೂರ್ಣ ಪಾದಚಾರಿ ಮಾರ್ಗವನ್ನು ಆವರಿಸಿಕೊಂಡಿದ್ದು, ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ವಾಹನ ಸಂಚಾರದ ನಡುವೆ ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತ ಸಂಭವಿಸುವ ಆತಂಕ ವ್ಯಕ್ತವಾಗಿದೆ.
ನಗರದಲ್ಲಿ ಅತಿಕ್ರಮಣ ತೆರವು, ಪಾದಚಾರಿ ಮಾರ್ಗಗಳ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಹೊಂದಿರುವ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಗರದ ಪ್ರಮುಖ ರಸ್ತೆಯಲ್ಲೇ ಇಂತಹ ಸ್ಪಷ್ಟ ಉಲ್ಲಂಘನೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು, ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಳವಡಿಸಿರುವ ಜಾಹೀರಾತು ಫಲಕವನ್ನು ತಕ್ಷಣ ತೆರವುಗೊಳಿಸಿ, ನಿಯಮ ಉಲ್ಲಂಘಿಸಿದ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ನಗರದಲ್ಲಿ ಇಂತಹ ಅಕ್ರಮ ಜಾಹೀರಾತು ಫಲಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಗರ ಸೌಂದರ್ಯ, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಪಾಲನೆಗೆ ಧಕ್ಕೆ ತರುವ ಇಂತಹ ಬೆಳವಣಿಗೆಗಳ ವಿರುದ್ಧ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ENGLISH SUMMARY…
Huge Advertisement Board on Footpath Sparks Public Outrage
Mysuru: A giant advertisement board installed on a pedestrian footpath at Kalidasa Road, near the new residence of former Minister G.T. Devegowda, has drawn criticism from the public.
The board, reportedly put up by an out-of-state private retail outlet, has occupied a major portion of the footpath, forcing pedestrians onto the busy road and raising safety concerns.
Citizens have alleged negligence by civic authorities, stating that the footpath was meant for safe public movement and that the installation violates municipal rules. Residents have urged the authorities to remove the illegal structure immediately and take action against those responsible.
#Mysuru #FootpathEncroachment #IllegalHoarding #PublicSafety #KalidasaRoad #CivicNegligence
Key words: Huge Advertisement Board,Footpath, , Public, Mysore






