ನಾಯಕತ್ವ ಪಲ್ಲಟ: ಮೈಸೂರಿನಲ್ಲಿ ಸಿಹಿ-ಕಹಿ ಭಾವನೆ

ಮೈಸೂರು, ಮೇ,29, 2026 (www.justkannada.in): ತವರು ಮಗ ಸಿದ್ದರಾಮಯ್ಯ ನಿರ್ಗಮನಕ್ಕೆ ಬೇಸರ, ಅಳಿಯ ಡಿ.ಕೆ.ಶಿವಕುಮಾರ್‌ ಗೆ ಮುಖ್ಯಮಂತ್ರಿ ಪಟ್ಟಕ್ಕೆ ಸಂಭ್ರಮ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಮೈಸೂರು ಜಿಲ್ಲೆಯಲ್ಲಿ ಸಿಹಿ-ಕಹಿ ಭಾವನೆಗಳನ್ನು ಮೂಡಿಸಿದೆ. ಒಂದೆಡೆ ಜಿಲ್ಲೆಯ ಹೆಮ್ಮೆಯ ನಾಯಕ ಹಾಗೂ ತವರು ಮಗನಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವುದಕ್ಕೆ ಬೇಸರ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಮೈಸೂರಿನ ಅಳಿಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರಲಿದ್ದಾರೆ ಎಂಬ ನಿರೀಕ್ಷೆ ಸಂಭ್ರಮಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಿಸಿರುವ ಹಿನ್ನೆಲೆಯಲ್ಲಿ, ಅವರ ಹುಟ್ಟೂರು ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ನಿರಾಸೆಯ ವಾತಾವರಣ ಕಂಡುಬಂದಿತು. ಗ್ರಾಮಸ್ಥರು ತಮ್ಮ ಊರಿನ ಮಗ ಮುಖ್ಯಮಂತ್ರಿ ಸ್ಥಾನ ತೊರೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು, ಹಲವರು ಈ ಬೆಳವಣಿಗೆಯನ್ನು ಮೌನವಾಗಿ ನೋಡುವಂತಾಗಿದೆ.

ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಐದು ವರ್ಷಗಳ ಕಾಲ ಹಾಗೂ 2023ರ ಮೇ ತಿಂಗಳಿನಿಂದ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ನಂತರ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೈಸೂರು ಜಿಲ್ಲೆಯ ನಾಯಕರಾಗಿ ಗುರುತಿಸಿಕೊಂಡಿದ್ದರು.

2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ಬಂದಿತ್ತು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಈ ಕುರಿತು ಯಾವುದೇ ಅಧಿಕೃತ ಒಪ್ಪಂದವಿಲ್ಲ ಎಂದು ಸಿದ್ದರಾಮಯ್ಯ ನಿರಂತರವಾಗಿ ಹೇಳುತ್ತಲೇ ಬಂದಿದ್ದರು. ಇದೀಗ ಹೈಕಮಾಂಡ್ ನಾಯಕರ ಭೇಟಿಯ ಬಳಿಕ ಅವರು ರಾಜೀನಾಮೆ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರ ನಿರ್ಗಮನ ಮೈಸೂರು ಜಿಲ್ಲೆಯಲ್ಲಿ ಬೇಸರ ಮೂಡಿಸಿದ್ದರೂ, ಇದೇ ವೇಳೆ ಜಿಲ್ಲೆಯ ಅಳಿಯ ಎಂದೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಸಾಧ್ಯತೆ ಸ್ಥಳೀಯರಲ್ಲಿ ಸಂತಸ ತಂದಿದೆ. ಮೈಸೂರಿನ ಉದ್ಯಮಿ ಆರ್. ತಿಮ್ಮಯ್ಯ (ಪಾಪಣ್ಣ) ಅವರ ಪುತ್ರಿಯನ್ನು ವಿವಾಹವಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಯ ಜನತೆ ತಮ್ಮ ಅಳಿಯ ಎಂದು ಕರೆಯುತ್ತಾರೆ. ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಮಾವನ ಮನೆಗೆ ಭೇಟಿ ನೀಡುತ್ತಿದ್ದ ಅವರು, ಸ್ಥಳೀಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಕಾರಣ ಜನರಲ್ಲಿ ವಿಶೇಷ ಅಭಿಮಾನ ಗಳಿಸಿದ್ದರು.

“ಡಿ.ಕೆ.ಶಿವಕುಮಾರ್ ನಮ್ಮ ಊರಿನ ಅಳಿಯ. ಮೈಸೂರಿನ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಪಾಪಣ್ಣ ಅವರ ಅಳಿಯ ಮುಖ್ಯಮಂತ್ರಿ ಆಗುತ್ತಿರುವುದು ಖುಷಿಯ ಸಂಗತಿ” ಎಂದು ಸ್ಥಳೀಯ ನಿವಾಸಿ ಎಡ್ವಿನ್ ಸಂತಸ ವ್ಯಕ್ತಪಡಿಸಿದರು.

ಸಿದ್ದರಾಮನಹುಂಡಿಯಲ್ಲಿ ಬೇಸರದ ಛಾಯೆ

ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ ಸುದ್ದಿ ಹೊರಬಿದ್ದ ಬಳಿಕ ಸಿದ್ದರಾಮನಹುಂಡಿ ಗ್ರಾಮದಲ್ಲಿ ಬೇಸರದ ವಾತಾವರಣ ನಿರ್ಮಾಣವಾಯಿತು. ಅನೇಕರು ಮನೆಗಳಲ್ಲೇ ಕುಳಿತು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದರು.

“ನಮ್ಮೂರಿನ ಮಗ ಮುಖ್ಯಮಂತ್ರಿ ಸ್ಥಾನ ತೊರೆಯುತ್ತಿರುವುದು ಬೇಸರದ ಸಂಗತಿ. ಅವರು ಉತ್ತಮ ಆಡಳಿತ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜೀನಾಮೆ ಯಾಕೆ ಬೇಕಾಯಿತು ಎಂಬ ಪ್ರಶ್ನೆ ಕಾಡುತ್ತಿದೆ” ಎಂದು ಗ್ರಾಮದ ಮುಖಂಡ ಚಿಕ್ಕರಂಗೇಗೌಡ ಅಭಿಪ್ರಾಯಪಟ್ಟರು.

ಒಟ್ಟಾರೆ, ತವರು ಮಗನ ನಿರ್ಗಮನದ ನೋವು ಮತ್ತು ಅಳಿಯನಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ನಿರೀಕ್ಷೆಯ ಸಂತಸ—ಈ ಎರಡೂ ಭಾವನೆಗಳು ಮೈಸೂರು ಜಿಲ್ಲೆಯಲ್ಲಿ ಒಂದೇ ವೇಳೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ENGLISH SUMMARY…

Mixed Emotions in Mysuru Over Leadership Change

Mysuru district is witnessing mixed emotions following the leadership change in the Karnataka Congress government. While people are disappointed that hometown leader Siddaramaiah is stepping down as Chief Minister, there is also excitement over the possibility of Mysuru’s son-in-law D.K. Shivakumar taking over the top post.

A sense of sadness prevailed in Siddaramaiah’s native village, Siddaramanahundi, where residents praised his leadership and expressed disappointment over his exit. At the same time, many in Mysuru are celebrating the rise of D.K. Shivakumar, who is considered the district’s “son-in-law” through his family ties to the city.

The leadership transition has thus created a unique blend of pride, joy, and disappointment across Mysuru.

Key words: Leadership, change, Sweet, bitter, feelings, Mysore, Siddaramaiah, DK Shivakumar